ಬೆಂಗಳೂರು, ಫೆಬ್ರವರಿ 5: ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಫೆಬ್ರವರಿ 9, 2026ರಿಂದ ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆ (Annual Automatic Fare Revision) ಜಾರಿಗೆ ಬರಲಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಮೆಟ್ರೋ ರೈಲುಗಳ ಕಾರ್ಯಾಚರಣೆ ಮತ್ತು ನಿರ್ವಹಣಾ ಕಾಯಿದೆ–2002ರ ಅಡಿಯಲ್ಲಿ ರಚಿಸಲಾದ ಮೊದಲ ಫೇರ್ ಫಿಕ್ಸೇಷನ್ ಕಮಿಟಿ (FFC) ಶಿಫಾರಸಿನಂತೆ ಈ ದರ ಪರಿಷ್ಕರಣೆ ಕಡ್ಡಾಯವಾಗಿದ್ದು, BMRCL ಅದನ್ನು ಅನುಷ್ಠಾನಗೊಳಿಸುತ್ತಿದೆ ಎಂದು ತಿಳಿಸಿದೆ.
FFC ತನ್ನ ವರದಿಯಲ್ಲಿ, 7.5 ವರ್ಷಗಳ ನಂತರ ದರ ಪರಿಷ್ಕರಣೆ ಹಾಗೂ 29 ದರ ವಲಯಗಳನ್ನು 10ಕ್ಕೆ ಇಳಿಸಿದ ಪರಿಣಾಮ ಸರಾಸರಿ 51.55% ದರ ಏರಿಕೆ ಸಂಭವಿಸಿದೆ ಎಂದು ಗಮನಿಸಿದೆ. ಭವಿಷ್ಯದಲ್ಲಿ ಇಂತಹ ತೀವ್ರ ಹಾಗೂ ಅಚಾನಕ್ ಏರಿಕೆಯನ್ನು ತಪ್ಪಿಸಲು, ವಾರ್ಷಿಕ ಸಣ್ಣ ದರ ಪರಿಷ್ಕರಣೆ ವ್ಯವಸ್ಥೆ ಜಾರಿಗೊಳಿಸುವಂತೆ ಶಿಫಾರಸು ಮಾಡಿತ್ತು.
ಈ ವ್ಯವಸ್ಥೆಯ ಅಡಿಯಲ್ಲಿ, ಆಪರೇಷನ್ ಮತ್ತು ಮೆಂಟೈನನ್ಸ್ ವೆಚ್ಚಕ್ಕೆ ಸಂಬಂಧಿಸಿದ ಸೂತ್ರ ಅಥವಾ ಗರಿಷ್ಠ 5%—ಯಾವುದು ಕಡಿಮೆಯೋ ಅದನ್ನು ಆಧರಿಸಿ, ಪ್ರತಿ ವರ್ಷ ದರ ಪರಿಷ್ಕರಣೆ ಮಾಡಲಾಗುತ್ತದೆ. ದರಗಳನ್ನು ಸಮೀಪದ ರೂಪಾಯಿಗೆ ವೃತ್ತಗೊಳಿಸಲಾಗುತ್ತದೆ.
ಎಷ್ಟು ದರ ಏರಿಕೆ?
BMRCL ತಿಳಿಸಿದಂತೆ, 2024–25ರ ಆಡಿಟ್ ಮಾಡಿದ ಹಣಕಾಸು ಅಂಕಿ ಅಂಶಗಳ ಪ್ರಕಾರ ವೆಚ್ಚದಲ್ಲಿ 10.20% ಏರಿಕೆ ಕಂಡುಬಂದಿದೆ. ಆದರೆ FFC ಮಾರ್ಗಸೂಚಿಯಂತೆ ದರ ಏರಿಕೆಯನ್ನು ಗರಿಷ್ಠ 5%ಕ್ಕೆ ಮಾತ್ರ ಮಿತಿಗೊಳಿಸಲಾಗಿದೆ.
ಇದರಿಂದ 96.10 ಕಿಮೀ ಉದ್ದದ ಮೆಟ್ರೋ ಜಾಲದಲ್ಲಿ:
- ಕನಿಷ್ಠ ₹1
- ಗರಿಷ್ಠ ₹5 ವರೆಗೆ ದರ ಏರಿಕೆ ಅನ್ವಯವಾಗಲಿದೆ.
0–2 ಕಿಮೀ ದೂರಕ್ಕೆ ಟಿಕೆಟ್ ದರ ₹10ರಿಂದ ₹11ಕ್ಕೆ, 30 ಕಿಮೀಗೂ ಅಧಿಕ ದೂರಕ್ಕೆ ₹90ರಿಂದ ₹95ಕ್ಕೆ ಏರಲಿದೆ.
ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ರಿಯಾಯಿತಿ ಮುಂದುವರಿಕೆ
ಪ್ರಯಾಣಿಕರ ಹಿತದೃಷ್ಟಿಯಿಂದ ಈ ಕೆಳಗಿನ ರಿಯಾಯಿತಿಗಳು ಮುಂದುವರಿಯಲಿವೆ:
- ಪೀಕ್ ಅವಧಿಯಲ್ಲಿ 5% ರಿಯಾಯಿತಿ
- ನಾನ್-ಪೀಕ್ ಅವಧಿಯಲ್ಲಿ 10% ರಿಯಾಯಿತಿ
- ಭಾನುವಾರ ಮತ್ತು ಮೂರು ರಾಷ್ಟ್ರೀಯ ಹಬ್ಬಗಳಲ್ಲಿ 10% ರಿಯಾಯಿತಿ
ಈ ವಾರ್ಷಿಕ 5% ದರ ಪರಿಷ್ಕರಣೆ ಟೂರಿಸ್ಟ್ ಕಾರ್ಡ್ಗಳು ಹಾಗೂ ಗ್ರೂಪ್ ಟಿಕೆಟ್ಗಳಿಗೂ ಅನ್ವಯವಾಗಲಿದೆ.
ಉದ್ದೇಶ: ಸ್ಥಿರತೆ, ಅಚಾನಕ್ ಹೊರೆ ತಪ್ಪಿಸುವುದು
ಸಣ್ಣ ವಾರ್ಷಿಕ ದರ ಏರಿಕೆ ವ್ಯವಸ್ಥೆಯಿಂದ ಆರ್ಥಿಕ ಸ್ಥಿರತೆ, ಸೇವಾ ವಿಶ್ವಾಸಾರ್ಹತೆ ಕಾಯ್ದುಕೊಳ್ಳಲಾಗುತ್ತದೆ ಮತ್ತು ಪ್ರಯಾಣಿಕರಿಗೆ ಒಮ್ಮೆಲೆ ದೊಡ್ಡ ದರ ಹೊರೆ ಬಾರದಂತೆ ಮಾಡಬಹುದು ಎಂದು BMRCL ತಿಳಿಸಿದೆ.
ಬೆಂಗಳೂರು ನಾಗರಿಕರಿಗೆ ಸುರಕ್ಷಿತ, ಸಮಯಪಾಲನೆಯುಳ್ಳ ಮತ್ತು ಕೈಗೆಟುಕುವ ಮೆಟ್ರೋ ಸೇವೆ ಒದಗಿಸುವ ಬದ್ಧತೆಯನ್ನು BMRCL ಪುನರುಚ್ಚರಿಸಿದೆ.
