ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಈ ವರ್ಷದ ದಸರಾ–ದೀಪಾವಳಿ ಹಬ್ಬದ ಅವಧಿಯಲ್ಲಿ ರೂ.46 ಕೋಟಿಯ ದಾಖಲೆಯ ಮಾರಾಟ ಸಾಧನೆ ಮಾಡಿದ್ದು, ಕಳೆದ ಸಾಲಿನಿಗಿಂತ ಶೇ.38 ರಷ್ಟು ವಹಿವಾಟು ಪ್ರಗತಿ ಸಾಧಿಸಿದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಅವರು ಇಂದು ವಿಕಾಸಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಐದು ದಶಕಗಳಿಂದ ರಾಜ್ಯದ ಹೈನುಗಾರಿಕೆ ಮತ್ತು ಸಹಕಾರ ಕ್ಷೇತ್ರದಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಕೆಎಂಎಫ್ ಸಂಸ್ಥೆ, ಈ ಬಾರಿ ನಂದಿನಿ ಬ್ರಾಂಡ್ನಡಿಯಲ್ಲಿ ಸಿಹಿತಿನಿಸು ಮಾರಾಟದಲ್ಲಿ ಹೊಸ ಮೈಲುಗಲ್ಲು ನಿರ್ಮಿಸಿದೆ.
“2025ರ ಹಬ್ಬದ ಅವಧಿಯಲ್ಲಿ ಕೆಎಂಎಫ್ ಮತ್ತು ಸದಸ್ಯ ಹಾಲು ಒಕ್ಕೂಟಗಳು ಒಟ್ಟಾಗಿ 1,100 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಿ ರೂ.46 ಕೋಟಿ ವಹಿವಾಟು ಸಾಧಿಸಿವೆ. ಕಳೆದ ವರ್ಷ ಮಾರಾಟವಾದ 725 ಮೆಟ್ರಿಕ್ ಟನ್ ಹಾಗೂ ರೂ.33.48 ಕೋಟಿಯೊಂದಿಗೆ ಹೋಲಿಸಿದರೆ ಇದು ಅತ್ಯುನ್ನತ ಸಾಧನೆ,” ಎಂದು ಸಚಿವ ವೆಂಕಟೇಶ್ ಹೇಳಿದರು.
ಹಬ್ಬದ ಸಮಯದಲ್ಲಿ ಹೆಚ್ಚುವರಿ ಬೇಡಿಕೆಯನ್ನು ಮುಂಚಿತವಾಗಿ ಅಂದಾಜಿಸಿ, ಎರಡು ತಿಂಗಳುಗಳ ಹಿಂದೆಲೇ ಸಹಕಾರಿ ಹಾಲು ಒಕ್ಕೂಟಗಳ ಸಹಕಾರದೊಂದಿಗೆ 1,000 ಮೆಟ್ರಿಕ್ ಟನ್ ಮಾರಾಟ ಗುರಿ ನಿಗದಿಪಡಿಸಲಾಗಿತ್ತು. “ಆ ಗುರಿಯನ್ನು ಮೀರಿಸಿ ಸಾಧನೆ ಮಾಡಿರುವುದು ರಾಜ್ಯದ ಹಾಲು ಉತ್ಪಾದಕರ ಶ್ರಮದ ಫಲ,” ಎಂದು ಅವರು ಹೇಳಿದರು.
ಪ್ರತಿದಿನ ರಾಜ್ಯದ ಹೈನುಗಾರ ರೈತರಿಂದ ಸರಾಸರಿ 1 ಕೋಟಿ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಅದರಲ್ಲಿನ 65 ಲಕ್ಷ ಲೀಟರ್ ಹಾಲು, ಮೊಸರು, ಯುಎಚ್ಟಿ ಹಾಲು ಉತ್ಪನ್ನಗಳು ರಾಜ್ಯ ಮತ್ತು ಹೊರರಾಜ್ಯ ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ ತಲುಪುತ್ತಿವೆ.
‘ನಂದಿನಿ’ ಬ್ರಾಂಡ್ನಡಿಯಲ್ಲಿ ತುಪ್ಪ, ಬೆಣ್ಣೆ, ಪನೀರ್, ಸಿಹಿತಿನಿಸುಗಳು, ಹಾಲಿನ ಪುಡಿ ಮತ್ತು ಪಾನೀಯಗಳು ಸೇರಿದಂತೆ 175 ಕ್ಕೂ ಹೆಚ್ಚು ಬಗೆಯ ಹಾಲು ಮತ್ತು ಹಾಲಿನ ಉತ್ಪನ್ನಗಳು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಕೇರಳ, ದೆಹಲಿ, ಅಸ್ಸಾಂ ಹಾಗೂ ಕೆಲ ವಿದೇಶಗಳಲ್ಲಿಯೂ ಯಶಸ್ವಿಯಾಗಿ ಮಾರಾಟವಾಗುತ್ತಿವೆ.
ಸಚಿವ ವೆಂಕಟೇಶ್ ಅವರು —
“ನಂದಿನಿ ಬ್ರಾಂಡ್ನ ಶುದ್ಧತೆ, ಗುಣಮಟ್ಟ ಮತ್ತು ಕೈಗೆಟುಕುವ ಬೆಲೆ ಗ್ರಾಹಕರ ವಿಶ್ವಾಸದ ಸಂಕೇತವಾಗಿದೆ. ಈ ಸಾಧನೆ ಕೆಎಂಎಫ್ನ ದೃಢತೆಯಷ್ಟೇ ಅಲ್ಲ, ಹಾಲು ಉತ್ಪಾದಕರ ಶ್ರಮ ಮತ್ತು ಸಹಕಾರಿ ಚಳುವಳಿಯ ಬಲಕ್ಕೆ ಸಾಕ್ಷಿಯಾಗಿದೆ,” ಹೇಳಿದರು.
