ರಾಷ್ಟ್ರಗೀತೆ ನಿರ್ಲಕ್ಷ್ಯ, ದಸರಾ ರಜೆ ಕಡಿತ ಹಾಗೂ ಮಕ್ಕಳ ಹಕ್ಕು ಉಲ್ಲಂಘನೆ ಆರೋಪ; ಪೋಷಕರಿಗೆ ಹೈಕೋರ್ಟ್ ಎಚ್ಚರಿಕೆ — “ಶಾಲೆಯ ಕೆಲಸದಲ್ಲಿ ಅಹಂ ತೋರಿಸಬೇಡಿ”.
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಹ್ಯಾರೋ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ನಡೆದ ರಾಷ್ಟ್ರಗೀತೆ ಕಡೆಗಣನೆ, ದಸರಾ ರಜೆ ಕಡಿತ ಮತ್ತು ಮಕ್ಕಳ ಹಕ್ಕು ಉಲ್ಲಂಘನೆ ಕುರಿತು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು, ಶಾಲಾ ಆಡಳಿತಕ್ಕೆ ನೋಟಿಸ್ ಜಾರಿಗೊಳಿಸಿದೆ.
ಸಹಕಾರನಗರದ ಅನಿಲ್ ಪಿ. ಮೆಣಸಿನಕಾಯಿ ಅವರು ತಮ್ಮ ಇಬ್ಬರು ಮಕ್ಕಳ ಪರವಾಗಿ — 10ನೇ ಮತ್ತು 12ನೇ ತರಗತಿಯ ವಿದ್ಯಾರ್ಥಿಗಳ ಪರವಾಗಿ — ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ನಡೆಸಿತು.
ವಿಚಾರಣೆ ವೇಳೆ ನ್ಯಾಯಮೂರ್ತಿ ಪೋಷಕರ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
“ತಂದೆ ತಮ್ಮ ಮಕ್ಕಳಲ್ಲಿ ಕೆಟ್ಟ ಅಭ್ಯಾಸ ಬೆಳೆಸುತ್ತಿದ್ದಾರೆ. ಇದು ಅಹಂನ ವಿಷಯವಾಗಿದೆ. ಇಂದು ರಾಷ್ಟ್ರಗೀತೆ ವಿವಾದ, ನಾಳೆ ಬೇರೆ ವಿಷಯ. ಶಾಲೆಯ ಕಾರ್ಯವಿಧಾನವನ್ನು ತಮ್ಮ ಇಚ್ಛೆಗೆ ತಕ್ಕಂತೆ ನಡೆಸಲು ಸಾಧ್ಯವಿಲ್ಲ. ತೃಪ್ತಿಯಿಲ್ಲದಿದ್ದರೆ ಬೇರೆ ಶಾಲೆಗೆ ಹೋಗಬಹುದು,” ಎಂದು ನ್ಯಾಯಮೂರ್ತಿ ಸ್ಪಷ್ಟವಾಗಿ ಎಚ್ಚರಿಸಿದರು.
ಪೋಷಕರ ಪರ ವಕೀಲರು ವಿಷಯದ ಗಂಭೀರತೆಯನ್ನು ಹೈಲೈಟ್ ಮಾಡಿದರು.
“ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಶಾಲೆ ರಾಷ್ಟ್ರಗೀತೆ ಕಡ್ಡಾಯಗೊಳಿಸಿದೆ ಹಾಗೂ ದಸರಾ ರಜೆ ದಿನಗಳನ್ನೂ ಹೆಚ್ಚಿಸಿದೆ. ಆದರೂ ಇನ್ನೂ ಅನೇಕ ಅಹಿತಕರ ಘಟನೆಗಳು ನಡೆಯುತ್ತಿವೆ. ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ. ಈ ಬಗ್ಗೆ ಪೊಲೀಸ್ ಹಾಗೂ ಮಕ್ಕಳ ಹಕ್ಕು ರಕ್ಷಣಾ ಆಯೋಗಕ್ಕೆ ದೂರು ನೀಡಿದಾಗ ಶಾಲಾ ಆಡಳಿತ ಮಂಡಳಿ ಮಕ್ಕಳಿಗೆ ಬೆದರಿಕೆ ಹಾಕಿದೆ,” ಎಂದು ವಾದಿಸಿದರು.
ಹೀಗಾಗಿ ಮಕ್ಕಳ ಹಕ್ಕು ರಕ್ಷಣಾ ಆಯೋಗದಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಹಾಗೂ ವಿದ್ಯಾರ್ಥಿಗಳಿಗೆ ಸೂಕ್ತ ರಕ್ಷಣೆ ಒದಗಿಸಲು ಪೊಲೀಸರಿಗೆ ಸೂಚನೆ ನೀಡುವಂತೆ ಅರ್ಜಿದಾರರು ಕೋರಿ ವಿನಂತಿಸಿದ್ದರು.
ನ್ಯಾಯಪೀಠವು ವಿಚಾರಣೆ ಬಳಿಕ ರಾಜ್ಯ ಸರ್ಕಾರ, ಮಕ್ಕಳ ಹಕ್ಕು ರಕ್ಷಣಾ ಆಯೋಗ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿಶ್ವನಾಥಪುರ ಠಾಣೆ, ಹಾಗೂ ಶಾಲೆಯ ನಿರ್ದೇಶಕರು ಸೇರಿದಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ನವೆಂಬರ್ 26ಕ್ಕೆ ಮುಂದೂಡಿದೆ.
