ಬೆಂಗಳೂರು : ಉತ್ತರಾಖಂಡದ ಹಿಮಾಲಯ ಪರ್ವತದ ಗರ್ಹಾವಲ್ ಪರ್ವತ ಶ್ರೇಣಿಗಳ ಸಹಸ್ತ್ರತಾಲ್ ಮಾಯಾಲಿ ಪ್ರದೇಶದಲ್ಲಿ ಚಾರಣಕ್ಕೆ ತೆರಳಿ ಮೃತಪಟ್ಟವರ ಮೃತದೇಹಗಳನ್ನು ಬೆಂಗಳೂರಿಗೆ ಕೊಂಡೊಯ್ಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಇಂದಿಲ್ಲಿ ತಿಳಿಸಿದ್ದಾರೆ.
ಗುರುವಾರ ಉತ್ತರಾಖಂಡದಲ್ಲಿ ಪರ್ವತದಲ್ಲಿ ಸಿಲುಕಿ ರಕ್ಷಿಸಲ್ಪಟ್ಟಿರುವ ಕರ್ನಾಟಕ ಚಾರಣಿಗರ ಜೊತೆ ಸಮಾಲೋಚನೆ ನಡೆಸಿದ ಬಳಿಕ ಅಲ್ಲಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಅನಂತರ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ಡೆಹ್ರಾಡೂನ್‍ನಲ್ಲಿ ಮೃತಪಟ್ಟ 9 ಜನ ಚಾರಣಿಗರ ಮೃತದೇಹಗಳನ್ನು ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ ಎಂದರು.
ಅನಂತರ ಮೃತದೇಹಗಳನ್ನು ಆಂಬ್ಯುಲೆನ್ಸ್ ಗಳ ಮೂಲಕ ಹೊಸದಿಲ್ಲಿಯ ವಿಮಾನ ನಿಲ್ದಾಣಕ್ಕೆ ಸಾಗಿಸಲಾಗುತ್ತದೆ. ನಾಳೆ(ಜೂ.7) ಬೆಳಗ್ಗೆ ದಿಲ್ಲಿ-ಬೆಂಗಳೂರು ವಿಮಾನಗಳಲ್ಲಿ ಮೃತದೇಹಗಳನ್ನು ರವಾನಿಸಲು ಸ್ಥಳವನ್ನು ಕಾಯ್ದಿರಿಸಿದ್ದೇವೆ. ಸಂಜೆ 5.50ರ ವಿಮಾನದಲ್ಲಿ ರಕ್ಷಣೆ ಮಾಡಲಾಗಿರುವ 13 ಮಂದಿ ಚಾರಣಿಗರು ಬೆಂಗಳೂರಿಗೆ ಹಿಂತಿರುಗಲು ಟಿಕೆಟ್ ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯದ 19 ಮಂದಿ ಚಾರಣಿಗರು ಉತ್ತರಾಖಂಡದ ಹಿಮಾಲಯದ ಸಹಸ್ತ್ರತಾಲ್ ಪರ್ವತಾರೋಹಣಕ್ಕೆ ತೆರಳಿ ಹವಾಮಾನ ವೈಪರೀತ್ಯದಿಂದಾಗಿ 9 ಮಂದಿ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಕುಟುಂಬದವರಿಗೆ ತಲುಪಿಸುವ ಮತ್ತು ರಕ್ಷಿಸಲ್ಪಟ್ಟಿರುವ ಉಳಿದ ಚಾರಣಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ಅವರು ಹೇಳಿದರು.