ಬೆಂಗಳೂರು:
ಪಿಟಿಸಿಎಲ್ 1978ರ ಅಧಿನಿಯಮ ಮತ್ತು ಇನಾಂ ಜಮೀನುಗಳ ಮರು ಮಂಜೂರಾತಿ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಮರುಪರಿಶೀಲಿಸುವ ಬದಲು ಶಾಸನ ಸಭೆಯಲ್ಲಿ ಅಗತ್ಯ ತಿದ್ದುಪಡಿ ಮಾಡಬೇಕಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶೈಲೇಂದ್ರ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ನಗರ ಜಿಲ್ಲಾಡಳಿತ ಹಾಗೂ ಆದಿಜಾಂಬವ ಸಂಘದ ವತಿಯಿಂದ ಶಾಸಕರಭವನದಲ್ಲಿ ನಡೆದ ಪಿಟಿಸಿಎಲ್ 1978ರ ಅಧಿನಿಯಮ ಮತ್ತು ಇನಾಂ ಜಮೀನುಗಳ ಮರು ಮಂಜೂರಾತಿ ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಸಂವಿಧಾನದ ವಿಧಿ 49 ಮತ್ತು 36 ರ ಕಾಯ್ದೆಯ ಅಂಶಗಳನ್ನು ಪರಿಗಣಿಸಿದೆ ಈ ತೀರ್ಪು ನೀಡಿದೆ. ಇದು ಕಾನೂನಿನ ಕೆಲ ಅಂಶಗಳನ್ನು ಪರಿಗಣಿಸದೆ ನೀಡಿರುವ ತೀರ್ಪಾಗಿದೆ ಎಂದು ವಿವರಿಸಿದರು.
ಸುಪ್ರೀಂ ಕೋರ್ಟ್ ಯಾವುದೇ ವಿಷಯ ಕುರಿತು ನೀಡಿದ ತೀರ್ಪು ಆದೇಶದ ಜೊತೆಗೆ ಕಾನೂನು ಆಗಿ ಹೊರ ಹೊಮ್ಮಲಿದೆ. ಪಿಟಿಸಿಎಲ್ ಕಾಯ್ದೆಯ ವಿಚಾರದಲ್ಲಿ ನೀಡಿರುವ ತೀರ್ಪು ಕೂಡ ಕಾನೂನಾಗಿ ಹೊರ ಹೊಮ್ಮಿದ್ದು ಇಂತಹ ಶಾಸನವನ್ನು ಹೋಗಲಾಡಿಸಲು ಶಾಸನ ಸಭೆಯ ಮೂಲಕ ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.
ವಿಧಾನ ಪರಿಷತ್ ಸದಸ್ಯ ಧರ್ಮಸೇನ ಮಾತನಾಡಿ ಎಲ್ಲಿಯವರಿಗೆ ಕೆಳಸಮುದಾಯದ ಜನರು ಇಂತಹ ಕಾನೂನುಗಳ ಕುರಿತು ಜಾಗೃತರಾಗಿರುವುದಿಲ್ಲವೋ ಅಲ್ಲಿಯವರೆಗೂ ಅನೇಕ ಪ್ರಮಾದಗಳು ಸಂಭವಿಸುತ್ತಿರುತ್ತವೆ ಇದಕ್ಕೆ ಜನಪ್ರತಿನಿಧಿಗಳನ್ನು ದೂಷಿಸುವುದು ಸರಿಯಲ್ಲ. ಚುನಾವಣೆ ಸಂದರ್ಭದಲ್ಲಿ ಎಚ್ಚರಿಕೆಯಿಂದ ಕೆಳ ಸಮುದಾಯದ ಜನರು ನಡೆದುಕೊಂಡರೆ ನಮಗೆ ನ್ಯಾಯ ದೊರೆಕಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಖ್ಯಾತ ವಕೀಲ ಪ್ರೊ. ಹರಿರಾಮ್ ಮಾತನಾಡಿ ನ್ಯಾಯಾಲಯಗಳು ತಮ್ಮ ವಿರುದ್ದವಾಗಿ ತೀರ್ಪುನೀಡಿದಾಗ ಸರ್ಕಾರಗಳು ಈ ಕುರಿತು ಪುನರ್ ಪರಿಶೀಲನೆ ನಡೆಸುವ ಬಗ್ಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾಗುತ್ತದೆ. ಪಿಟಿಸಿಎಲ್ 1978 ರ ಅಧಿನಿಯಮ ಮತ್ತು ಮರು ಮಂಜೂರಾತಿ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಬರುವುದಿಲ್ಲ. ಸಲ್ಲಿಸಿದರೂ ಕೂಡ ಇದಕ್ಕೆ ಸೂಕ್ತ ನ್ಯಾಯ ದೊರಕುವ ಸಾಧ್ಯತೆ ಕಡಿಮೆ ಈ ಹಿನ್ನೆಲೆಯಲ್ಲಿ ಇದಕ್ಕೆ ತಿದ್ದುಪಡಿಯ ಅಗತ್ಯವಿದೆ. ಈ ಬಗ್ಗೆ ಜನಪ್ರತಿನಿಧಿಗಳು ಶಾಸನ ಸಭೆಯಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ತಿದ್ದುಪಡಿ ತರುವ ಅವಶ್ಯಕತೆ ಇದೆ ಎಂದರು.
ಪಿಟಿಸಿಎಲ್ 1978ರ ಅಧಿನಿಯಮ ಮತ್ತು ಇನಾಂ ಜಮೀನುಗಳ ಮರು ಮಂಜೂರಾತಿ ತಿದ್ದುಪಡಿಗೆ ಶಾಸನ ಸಭೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯದ ಎಲ್ಲ ಕಡೆ ಜನವರಿ 31 ರಂದು ಭಾರತೀಯ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಆದಿ ಜಾಂಬವ ಸಂಘದ ರಾಜ್ಯಾಧ್ಯಕ್ಷ ಜಂಬೂದ್ವೀಪ ಸಿದ್ದರಾಜು ಮಾತನಾಡಿ, ದಲಿತರು ಮತ್ತು ಕೆಳ ಸಮುದಾಯದವರು ತಮಗೆ ಮಂಜೂರಾಗಿರುವ ಜಮೀನುಗಳು ಪರಬಾರೆಯಾಗಿರುವ ಬಗ್ಗೆ ಉಪ ವಿಭಾಗಾಧಿಕಾರಿಗಳು ಈ ಜಮೀನುಗಳನ್ನು ನಿಯಮ ಉಲ್ಲಂಘಿಸಿ ಖರೀದಿ ಮಾಡಿರುವವರಿಂದ ಬಿಡಿಸಿಕೊಡುವ ಬದಲು ಮೂಲ ಮಂಜೂರಿದಾರರ ವಿರುದ್ದವಾಗಿ ತೀರ್ಪು ನೀಡುತ್ತಿದ್ದಾರೆ ಈ ಕುರಿತು ಸವಿಸ್ತಾರವಾಗಿ ಚರ್ಚಿಸಿ ಸೂಕ್ತ ನಿರ್ಣಯಗಳನ್ನು ಕೈಗೊಳ್ಳುವ ಕುರಿತು ಸರ್ಕಾರಕ್ಕೆ ಎಚ್ಚರಿಕೆ ನೀಡಲು ಇಂತಹ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದ ಜಮೀನಿನ ಮೂಲ ನೊಂದ ಕುಟುಂಬದವರು ಖರೀದಿದಾರರು ಮತ್ತು ಕಂದಾಯ ಅಧಿಕಾರಿಗಳಿಂದ ಅನುಭವಿಸುತ್ತಿರುವ ಕಿರುಕುಳವನ್ನು ಪ್ರಸ್ತಾಪಿಸಿ ಸೂಕ್ತ ಪರಿಹಾರ ಒದಗಿಸುವಂತೆ ಅಹವಾಲು ಸಲ್ಲಿಸಿದರು.
ಮಾಜಿ ಸಚಿವ, ಶಾಸಕ ಎಂ. ಕೃಷ್ಣಪ್ಪ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಷ್ಟೀಯ ಉಪಾಧ್ಯಕ್ಷ ಎಂ. ವೆಂಕಟಸ್ವಾಮಿ, ದಲಿತ ಮುಖಂಡರಾದ ರಮೇಶ್ ಮತ್ತಿರರು ಸೇರಿದಂತೆ ಭಾಗವಹಿಸಿದ್ದರು.