ನವ ದೆಹಲಿ: ದಿಲ್ಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತರ ಕುಟುಂಬಸ್ಥರಿಗೆ ತಲಾ 10 ಲಕ್ಷ ರೂ. ಮತ್ತು ಗಂಭೀರವಾಗಿ ಗಾಯಗೊಂಡವರಿಗೆ 2.5 ಲಕ್ಷ ಹಾಗೂ ಸಣ್ಣಪುಟ್ಟ ಗಾಯಗೊಂಡವರಿಗೆ 1 ಲಕ್ಷ ರೂ. ಪರಿಹಾರವನ್ನು ರೈಲ್ವೆ ಸಚಿವಾಲಯ ರವಿವಾರ ಘೋಷಿಸಿದೆ.
ಈ ಕುರಿತು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಎಕ್ಸ್ ನಲ್ಲಿ ಸಂತಾಪವನ್ನು ಸೂಚಿಸಿದ್ದು, ಇದು ದುರದೃಷ್ಟಕರ ಘಟನೆ, ಕಾಲ್ತುಳಿತ ಸಂಭವಿಸಿರುವುದರಿಂದ ತೀವ್ರ ದುಃಖವಾಗಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಎಲ್ಲರಿಗೂ ನನ್ನ ಸಂತಾಪಗಳು ಎಂದು ಹೇಳಿದ್ದಾರೆ.
ದಿಲ್ಲಿ ರೈಲು ನಿಲ್ಧಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 14 ಮಹಿಳೆಯರು ಸೇರಿದಂತೆ 18 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳಲು ಪ್ರಯಾಣಿಕರು ದಿಲ್ಲಿ ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿದ್ದರು. ಆದರೆ ಕೆಲವು ರೈಲುಗಳು ವಿಳಂಬವಾದ ಕಾರಣ ಪ್ಲಾಟ್‌ಫಾರ್ಮ್ ಸಂಖ್ಯೆ 13 ಮತ್ತು 14ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಜಮಾಯಿಸಿದ್ದರು. ಪ್ಲಾಟ್‌ಫಾರ್ಮ್ ಬದಲಾವಣೆ ಬಗ್ಗೆ ತಪ್ಪಾಗಿ ಪ್ರಕಟಣೆ ಹೊರಡಿಸಿದ್ದರಿಂದ ಗೊಂದಲ ಉಂಟಾಗಿ ಕಾಲ್ತುಳಿತ ಸಂಭವಿಸಿರುವ ಸಾಧ್ಯತೆಯಿದೆ ಎಂದೂ ಮೂಲಗಳು ತಿಳಿಸಿವೆ. ಕಾಲ್ತುಳಿತಕ್ಕೆ ನೈಜ ಕಾರಣ ತನಿಖೆಯ ಬಳಿಕವೇ ತಿಳಿದು ಬರಬೇಕಿದೆ.