₹2 ಕೋಟಿ ವೆಚ್ಚದ ಪಾಲಿಕ್ಲಿನಿಕ್: ಆರೋಗ್ಯ ಸಚಿವ ಡಾ.ಕೆ.ಸುಧಾಕರ್
ಚಿಕ್ಕಬಳ್ಳಾಪುರ:
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಇಂದು ತಮ್ಮ ತವರು ಜಿಲ್ಲೆ ಮತ್ತು ಸ್ವಕ್ಷೇತ್ರ ಚಿಕ್ಕಬಳ್ಳಾಪುರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು.
ಚಿಕ್ಕಬಳ್ಳಾಪುರ ನಗರಸಭೆ ಆವರಣದಲ್ಲಿ ಬ್ಯಾಂಕ್ ಆಫ್ ಬರೋಡದ ನೂತನ ಪಾವತಿ ಕೇಂದ್ರವನ್ನು ಸಚಿವರು ಉದ್ಘಾಟಿಸಿದರು. ಈ ಪಾವತಿ ಕೇಂದ್ರ ಜನರಿಗೆ ಹಲವು ರೀತಿಯಲ್ಲಿ ನೆರವಾಗಲಿದೆ. ಈ ವ್ಯವಸ್ಥೆಯ ಮೂಲಕ ಜನರು ತ್ವರಿತವಾಗಿ ಮತ್ತು ಸುಲಭವಾಗಿ ಹಣ ಪಾವತಿಸಬಹುದು. ಇದರಿಂದ ಹಿರಿಯ ನಾಗರಿಕರು, ದಿವ್ಯಾಂಗರು ಬ್ಯಾಂಕ್ ಗಳಿಗೆ ಹೋಗುವುದು ತಪ್ಪುತ್ತದೆ. ಇದು ನಗರಸಭೆಯ ವಿವಿಧ ಶುಲ್ಕಗಳ ಪಾವತಿಗೆ ಸೀಮಿತವಾಗಿರುವುದರಿಂದ ಹೆಚ್ಚು ಜನಜಂಗುಳಿ ಉಂಟಾಗುವುದಿಲ್ಲ. ಜೊತೆಗೆ ಪಾವತಿ ಕೇಂದ್ರದಲ್ಲಿ ಹಣ ಪಾವತಿ ಮಾಡಿದ ನಂತರ ಚಲನ್ ಪ್ರತಿಯನ್ನು ನಗರಸಭೆಗೆ ಸಲ್ಲಿಸಲು ಅನುಕೂಲವಾಗಲಿದೆ. ನಗದು ರಹಿತ ಪಾವತಿಯ ಅನುಕೂಲ ಇದರಿಂದ ದೊರೆಯಲಿದೆ.
ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯ ಕೃಷ್ಣಾ ಟಾಕೀಸ್ ಮುಂಭಾಗದಲ್ಲಿ IDSMT ಯೋಜನೆಯಡಿ ₹73 ಲಕ್ಷದಲ್ಲಿ ನಿರ್ಮಿಸಿರುವ ಮಳಿಗೆಗಳನ್ನು ಸಚಿವರು ಉದ್ಘಾಟಿಸಿದರು. ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಸಮಗ್ರ ಯೋಜನೆಯಡಿ ನಿರ್ಮಿಸಲಾಗಿರುವ ಈ ಕಟ್ಟಡಗಳು ಸಣ್ಣ ಮತ್ತು ಅತೀ ಸಣ್ಣ ವ್ಯಾಪಾರಿಗಳಿಗೆ ಕಡಿಮೆ ಬಾಡಿಗೆ ವೆಚ್ಚದಲ್ಲಿ ಸೂಕ್ತ ಮಾರುಕಟ್ಟೆ ಸ್ಥಳ ಒದಗಿಸಲಿದೆ.
ಚಿಕ್ಕಬಳ್ಳಾಪುರ ನಗರದ ವಿವಿಧ ಕಡೆ ನಗರಾಭಿವೃದ್ಧಿ ಮತ್ತು ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಒಟ್ಟು ₹3.3 ಕೋಟಿ ವೆಚ್ಚದಲ್ಲಿ ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಸಚಿವ ಡಾ.ಕೆ.ಸುಧಾಕರ್ ಭೂಮಿ ಪೂಜೆ ನೆರವೇರಿಸಿದರು. ಬಳಿಕ ತುಮಕಲಹಳ್ಳಿ ಗ್ರಾಮದಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರದ ಕಟ್ಟಡದ ನೆಲ ಅಂತಸ್ತು ಮತ್ತು 1ನೇ ಅಂತಸ್ತು ನಿರ್ಮಾಣ ಕಾಮಗಾರಿಗೆ ಸಚಿವರು ಚಾಲನೆ ನೀಡಿದರು. ಈ ಕಾಮಗಾರಿಗೆ ಸುಮಾರು ₹2.48 ಕೋಟಿ ವೆಚ್ಚವಾಗಲಿದೆ.
ಹೊನ್ನೇನಹಳ್ಳಿ ಗ್ರಾಮದಲ್ಲಿ ₹ 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಪಾಲಿಕ್ಲಿನಿಕ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಸಚಿವ ಡಾ.ಕೆ.ಸುಧಾಕರ್ ನೆರವೇರಿಸಿದರು. ಈ ಮೂಲಕ ಒಂದೇ ಸೂರಿನಡಿ ಎಲ್ಲಾ ರೀತಿಯ ಪಶು ವೈದ್ಯಕೀಯ ಸೇವೆ ಸಿಗಲಿದೆ. ಪ್ರಯೋಗಾಲಯ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಎಕ್ಸ್ ರೇ ಸೌಲಭ್ಯಗಳು ಈ ಕ್ಲಿನಿಕ್ ನಲ್ಲಿ ಇರಲಿದೆ. 1.20 ಎಕರೆಯಲ್ಲಿ ನಿರ್ಮಾಣವಾಗುತ್ತಿರುವ ಈ ಪಾಲಿ ಕ್ಲಿನಿಕ್ ನಲ್ಲಿ ಬರಡು ರಾಸುಗಳಿಗೆ ಪ್ರಸೂತಿ ತಜ್ಞರಿಂದ ಚಿಕಿತ್ಸೆ, ತುರ್ತು ಸಂದರ್ಭಗಳಲ್ಲಿ ರೈತರ ಮನೆ ಬಾಗಿಲಿಗೆ ಆ್ಯಂಬುಲೆನ್ಸ್ ಸೇವೆ ಸಹಿತ ಅನೇಕ ಸೇವೆಗಳು ಸಿಗಲಿವೆ.