ಬೆಂಗಳೂರು: ಹೊಸ ವರ್ಷದ ಸಂಭ್ರಮದ ಮುನ್ನಲೇ ನಗರದಲ್ಲಿ ಭದ್ರತಾ ಕ್ರಮಗಳನ್ನು ಗಟ್ಟಿಗೊಳಿಸಲು ಬೆಂಗಳೂರು ಪೊಲೀಸ್ ಇಲಾಖೆ ತೀವ್ರ ಸನ್ನಾಹಗಳನ್ನು ಆರಂಭಿಸಿದೆ ಎಂದು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ವರ್ಷಕ್ಕೆ ಇನ್ನೂ ಸಮಯ ಇದ್ದರೂ, ಇತ್ತೀಚಿನ ಕೆಲವು ಘಟನೆಗಳ ಹಿನ್ನೆಲೆಗಳನ್ನು ಗಮನಿಸಿ ತಕ್ಷಣ ಕಾರ್ಯಪ್ರವೃತ್ತರಾಗಬೇಕಾಯಿತು ಎಂದು ಹೇಳಿದರು.
“ನಿನ್ನೆ ನಾವು ಪ್ರೆಸ್ ಮೀಟ್ ನಡೆಸಲಿಲ್ಲ. ಏಕೆಂದರೆ ಇಂದು ಮಧ್ಯಾಹ್ನ ನಮಗೆ ಒಂದು ಮಹತ್ವದ ಇಂಟರ್-ಡಿಪಾರ್ಟ್ಮೆಂಟಲ್ ಸಭೆ ಇದೆ. ಹಲವು ಇಲಾಖೆಗಳಿಂದ ಅಧಿಕಾರಿಗಳು ಭಾಗವಹಿಸಲಿದ್ದಾರೆ,” ಎಂದು ಕಮಿಷನರ್ ಹೇಳಿದರು.
ಸಭೆಗೆ ಮುಂಚಿತವಾಗಿ, ನಗರ ಪೊಲೀಸ್ ವಿಭಾಗಗಳಾದ ಡಿಸಿಪಿಗಳು, ಜಂಟಿ ಕಮಿಷನರ್ ಅವರಿಗೆ ತಮ್ಮ ತಮ್ಮ ವಲಯಗಳಲ್ಲಿ ಮೊತ್ತ ಮೊದಲ ತಯಾರಿ ಸಭೆ ನಡೆಸುವಂತೆ ಸೂಚನೆ ನೀಡಲಾಗಿದೆ. “ಅವರು ತಮ್ಮ ಸಭೆಗಳನ್ನು ಪೂರ್ಣಗೊಳಿಸಿದ್ದಾರೆ. ನಂತರ ಇಂದು ನಮ್ಮ ಕ್ರೈಮ್ ಮೀಟಿಂಗ್ ಇದೆ. ಈ ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳುವುದು ಸೂಕ್ತವೆನ್ನಿಸಿ ಇಂದು ಮೀಡಿಯಾಗೆ ಬ್ರೀಫ್ ಮಾಡುತ್ತಿದ್ದೇನೆ,” ಎಂದು ಸಿಂಗ್ ಹೇಳಿದರು.
ಗೋವಾ ಘಟನೆ ಬಳಿಕ ಫೈರ್ ಸೆಫ್ಟಿಗೆ ವಿಶೇಷ ಸೂಚನೆ
ಗೋವಾದಲ್ಲಿ ಸಂಭವಿಸಿದ ಇತ್ತೀಚಿನ ದುರಂತ ಘಟನೆಯ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಕಮಿಷನರ್ ಅವರು, ಬೆಂಗಳೂರು ನಗರದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಫೈರ್ ಸೇಫ್ಟಿ ಪರಿಶೀಲನೆ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
“ಗೋವಾ ಘಟನೆಯ ಹಿನ್ನೆಲೆ ನೋಡಿಕೊಂಡು ನಾವು ಈಗಾಗಲೇ ಫೈರ್ ಡಿಪಾರ್ಟ್ಮೆಂಟ್ ಅನ್ನು ಸಂಪರ್ಕಿಸಿದ್ದೇವೆ. ಹೊಸ ವರ್ಷದ ಸಂಭ್ರಮದ ವೇಳೆ ಹೆಚ್ಚಿನ ಜನಸಂದಣಿ ಇರುವ ಪ್ರತಿಯೊಂದು ಸ್ಥಳದಲ್ಲೂ ಫೈರ್ ಆಡಿಯ್ಟ್ ಮಾಡಬೇಕೆಂದು ಅಧಿಕೃತ ಪತ್ರವನ್ನು ಕಳುಹಿಸಿದ್ದೇವೆ. ಆಡಿಯ್ಟ್ ಪೂರ್ಣಗೊಳಿಸದೆ ಯಾವುದೇ ಸ್ಥಳಕ್ಕೆ ಪರವಾನಗಿ ನೀಡುವುದಿಲ್ಲ,” ಎಂದು ಅವರು ಹೇಳಿದರು.
ನಗರದ ಭದ್ರತೆ, ಸಾರ್ವಜನಿಕ ಸುರಕ್ಷತೆ, ಅಗ್ನಿ ನಿಯಂತ್ರಣ, ಸಂಚಾರ, ಎಕ್ಸೈಸ್ ಹಾಗೂ ಬಿಬಿಎಂಪಿ—ಎಲ್ಲಾ ಇಲಾಖೆಗಳು ಹೊಸ ವರ್ಷದ ರಾತ್ರಿ ಯಾವುದೇ ಅಸಮಂಜಸ ಘಟನೆ ನಡೆಯದಂತೆ ಪರಸ್ಪರ ಸಹಕಾರದಿಂದ ಕಾರ್ಯಾಚರಿಸಲಿವೆ ಎಂದು ಕಮಿಷನರ್ ಹೇಳಿದರು.
