ಗ್ಯಾಸ್ ದರ ಏರಿಕೆ; ಕೇಂದ್ರದ ವಿರುದ್ಧ Congress ಪ್ರತಿಭಟನೆ
ಮದ್ಯಪ್ರಾಚ್ಯ ಸಂಘರ್ಷದ ಮಧ್ಯೆ LPG ಗ್ಯಾಸ್ ಸಿಲಿಂಡರ್ ದರದಲ್ಲಿ 60 ರೂ. ಏರಿಕೆ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಸದಸ್ಯರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ನೇತೃತ್ವದಲ್ಲಿ ಪ್ರತಿಭಟನೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಮುಖವಾಡ ಧರಿಸಿ ದರ ಏರಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ಭಾರತದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಹಣದುಬ್ಬರ ಮತ್ತು ಬೆಲೆ ಏರಿಕೆಯಿಂದ ತತ್ತರಿಸಿಹೋಗಿರುವ ಸಮಯದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎಲ್ಪಿಜಿ ಸಿಲಿಂಡರ್ ದರ ಹೆಚ್ಚಿಸಿರುವುದು ಅಕ್ಷಮ್ಯ. ಪ್ರಧಾನಿಗಳು ತಮ್ಮ ರಾಜತಾಂತ್ರಿಕ ವೈಫಲ್ಯಕ್ಕೆ ಕೋಟ್ಯಂತರ ಭಾರತೀಯರು ಯಾಕೆ ಬೆಲೆ ತೆರಬೇಕು. ಜಾಗತಿಕ ಮಟ್ಟದಲ್ಲಿ ದೇಶದ ಮಾನ ಕಳೆಯುತ್ತಿರುವ ಮೋದಿಯವರು ಬಹಿರಂಗವಾಗಿ ದೇಶದ ಜನರ ಕ್ಷಮೆಯಾಚಿಸಿ, ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಸಾಲವಿಲ್ಲದೆ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ: ಸಿದ್ದರಾಮಯ್ಯ
ಸಾಲವಿಲ್ಲದೆ ಯಾವುದೇ ದೇಶ ಅಥವಾ ರಾಜ್ಯ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು ಈ ಮೂಲಕ ಬಜೆಟ್ನಲ್ಲಿ ಸಾಲದ ಹೆಚ್ಚಳ ಕುರಿತು ಬಿಜೆಪಿ ಟೀಕೆಗೆ ತಿರುಗೇಟು ನೀಡಿದ್ದಾರೆ. ಸಾಲದ ಮಿತಿಯನ್ನು ಕರ್ನಾಟಕ ಹಣಕಾಸಿನ ಜವಾಬ್ದಾರಿ ಕಾಯ್ದೆ ನಿಯಮಗಳೊಳಗೆ ಇಟ್ಟುಕೊಂಡೇ ಬಜೆಟ್ ಮಂಡಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ದೇಶದ ಸಾಲವು ಸುಮಾರು 165 ಲಕ್ಷ ಕೋಟಿ ಆಗಿದೆ. ಈ ವರ್ಷದ ಕೇಂದ್ರ ಸರ್ಕಾರದ ಹಣಕಾಸು ಕೊರತೆ ಶೇ.4.4 ಆಗಿದ್ದು, ಒಟ್ಟು ಸಾಲ 218 ಲಕ್ಷ ಕೋಟಿ ಆಗಿದೆ ಎಂದು ಹೇಳಿದರು. 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದಾಗ ದೇಶದ ಸಾಲ 53.11 ಲಕ್ಷ ಕೋಟಿ ಇತ್ತು. ಈಗ ಅದು 165 ಲಕ್ಷ ಕೋಟಿ ಆಗಿದೆ. ಕೇಂದ್ರದಿಂದ ರಾಜ್ಯಕ್ಕೆ ನೀಡಬೇಕಾದ ಅನುದಾನ ಸಂಪೂರ್ಣವಾಗಿ ಬಂದಿದ್ದರೆ ರಾಜ್ಯದಲ್ಲಿ ಆದಾಯ ಕೊರತೆ ಉಂಟಾಗುತ್ತಿರಲಿಲ್ಲ. ಟೀಕೆ ಮಾಡುವುದು ಸುಲಭ, ಹೀಗಾಗಿ ನಮ್ಮನ್ನು ಪ್ರಶ್ನಿಸುವ ನೈತಿಕ ಹಕ್ಕು ಬಿಜೆಪಿಗಿಲ್ಲ ಎಂದು ತಿರುಗೇಟು ನೀಡಿದರು.
ಡಾಗ್ ಸತೀಶ್ ಗೆ ಜೀವ ಬೆದರಿಕೆ: ರಜತ್ ವಿರುದ್ಧ FIR
ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಪರ್ಧಿ ಡಾಗ್ ಸತೀಶ್ ಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇರೆಗೆ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಡಾಗ್ ಸತೀಶ್ ನೀಡಿದ ದೂರಿನ ಆಧಾರದ ಮೇಲೆ ರಜತ್ ವಿರುದ್ಧ FIR ದಾಖಲಾಗಿದೆ. ಪೊಲೀಸರು BNS ಸೆಕ್ಷನ್ 351, 352ರ ಅಡಿ ರಜತ್ ಮತ್ತು ಧನರಾಜ್ ಮೇಲೆ ಕೇಸ್ ದಾಖಲು ಮಾಡಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ರಜತ್ ವಿರುದ್ಧ ಗಿರೀಶ್ ಕುಮಾರ್ ಎಂಬುವರು ಬೆಂಗಳೂರಿನ ಕೆಆರ್ ಪುರಂ ಠಾಣೆಯಲ್ಲಿ ದೂರು ನೀಡಿದ್ದರು. ಬೆದರಿಕೆ ಮತ್ತು ನಿಂದನೆ ಆರೋಪ ಸಂಬಂಧ ಪ್ರಕರಣ ದಾಖಲಾಗಿದೆ. ಮೊಬೈಲ್ ಕರೆ ಮಾಡಿ ಬೆದರಿಕೆ ಹಾಕಿರುವುದಾಗಿ ಗಿರೀಶ್ ಕುಮಾರ್ ದೂರಿನಲ್ಲಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ 124 ಬಾಂಗ್ಲಾದೇಶಿಗರು ವಶಕ್ಕೆ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ 124 ಬಾಂಗ್ಲಾದೇಶಿ ಪ್ರಜೆಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಡುಗೋಡಿ ಮತ್ತು ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಲೆಸಿದ್ದ 48 ಪುರುಷರು, 42 ಮಹಿಳೆಯರು ಮತ್ತು 34 ಮಕ್ಕಳನ್ನು ವಶಕ್ಕೆ ಪಡೆಯಲಾಗಿದೆ. ಇವರೆಲ್ಲಾ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿ ಅಕ್ರಮವಾಗಿ ವಾಸಿಸುತ್ತಿದ್ದರು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಅಕ್ರಮವಾಗಿ ವಾಸಿಸುತ್ತಿರುವ ಬಾಂಗ್ಲಾದೇಶಿ ಪ್ರಜೆಗಳನ್ನು ಅವರ ದೇಶಕ್ಕೆ ಗಡೀಪಾರು ಮಾಡಲು ಮುಂದಿನ ಸೂಕ್ತ ಕ್ರಮಕ್ಕಾಗಿ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಅಧಿಕಾರಿಗಳಿಗೆ ವರದಿಯನ್ನು ಸಲ್ಲಿಸಲಾಗಿದೆ ಎಂದರು.
