LPG ಕೊರತೆ, 1 ವಾರ ಹೋಟೆಲ್ಗಳಿಗೆ ವಾಣಿಜ್ಯ ಸಿಲಿಂಡರ್ ಪೂರೈಕೆ ಅಸಾಧ್ಯ
ಪಶ್ಚಿಮ ಏಷ್ಯಾ ನಡುವಿನ ಯುದ್ಧದಿಂದಾಗಿ ರಾಜ್ಯಕ್ಕೆ ಇಂಧನ ಕೊರತೆ ಎದುರಾಗಿದೆ. ಅಡುಗೆ ಅನಿಲ ಪೂರೈಕೆಯಲ್ಲೂ ಭಾರಿ ವ್ಯತ್ಯಯ ಉಂಟಾಗಿದ್ದು ಇದು ಸಾರ್ವಜನಿಕರು ಹಾಗೂ ಹೋಟೆಲ್ ಉದ್ಯಮದ ಮೇಲೆ ನೇರ ಪರಿಣಾಮ ಬೀರಿದೆ. ಈ ಬಗ್ಗೆ ವಿಧಾನಸಭೆಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ ಶುಕ್ರವಾರ ಮಾಹಿತಿ ನೀಡಿದರು. ಪರಿಸ್ಥಿತಿ ಅನಿವಾರ್ಯವಾಗಿದ್ದು ಸ್ಟಾಕ್ ಲಭ್ಯವಿಲ್ಲದ ಕಾರಣ ಕನಿಷ್ಠ ಒಂದು ವಾರ ಹೋಟೆಲ್ಗಳಿಗೆ ವಾಣಿಜ್ಯ ಸಿಲಿಂಡರ್ಗಳನ್ನು ಪೂರೈಕೆ ಸಾಧ್ಯವಾಗುವುದಿಲ್ಲ. ವಾಣಿಜ್ಯ ಸಿಲಿಂಡರ್ಗಳ ಕೊರತೆ 10 ದಿನಗಳಲ್ಲಿ ಕಡಿಮೆಯಾಗುತ್ತದೆ ಎಂದು ಆಶಿಸುತ್ತೇನೆ ಎಂದರು. ಇನ್ನು ಹೋಟೆಲ್ ಮಾಲೀಕರು ಅಗತ್ಯ ಆಹಾರಗಳನ್ನು ತಯಾರಿಸಲು ವಿದ್ಯುತ್ ಸ್ಟವ್ ಬಳಸುವಂತೆ ಸಲಹೆ ನೀಡಿದರು. LPG ಕೊರತೆಯಿಂದಾಗಿ ಕೆಲವು ಹೋಟೆಲ್ಗಳು ಸ್ಥಗಿತಗೊಂಡಿವೆ. ಇನ್ನು ಕೆಲವು ಹೋಟೆಲ್ಗಳು ಮೆನು ಕಡಿತಗೊಳಿಸಿವೆ. PG ಗಳಲ್ಲಿ ಆಹಾರ ತಯಾರಿಕೆ, ದೇವಾಲಯಗಳಲ್ಲಿ ಪ್ರಸಾದ ವಿತರಣೆ ಮತ್ತು ಆಟೋಗಳ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ಅಡ್ಡಮತದಾನ ಭೀತಿ; ಬೆಂಗಳೂರಿಗೆ ಒಡಿಶಾದ congress ಶಾಸಕರು
ರಾಜ್ಯ ಚುನಾವಣೆಗೆ ಮೊದಲೇ ಒಡಿಶಾ ಕಾಂಗ್ರೆಸ್ನಲ್ಲಿ ಆಪರೇಷನ್ ಕಮಲದ ಭೀತಿ ಎದುರಾಗಿದ್ದು 14 ಮಂದಿ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬಂದಿದ್ದಾರೆ. ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಡ್ಡ ಮತದಾನದ ಭೀತಿ ಹೆಚ್ಚಾಗಿರುವುದರಿಂದ ತನ್ನ ಶಾಸಕರನ್ನು ಸುರಕ್ಷಿತವಾಗಿ ಇರಿಸಲು ಕಾಂಗ್ರೆಸ್ ರೆಸಾರ್ಟ್ ರಾಜಕೀಯಕ್ಕೆ ಮುಂದಾಗಿದೆ. ಒಡಿಶಾ ಮಾಜಿ ಸಂಸದ ಭಕ್ತ ಚರಣ್ ದಾಸ್ ಹಾಗೂ ಕಾಂಗ್ರೆಸ್ ವಕ್ತಾರ ದುರ್ಗಾ ಪ್ರಸಾದ್ ಪಾಂಡಾ ಸೇರಿ ಒಟ್ಟು ಸುಮಾರು 14 ಮಂದಿ ಬೆಂಗಳೂರಿಗೆ ಬಂದಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಿಂದ ಪೊಲೀಸ್ ಬಂದೋಬಸ್ತ್ ಮತ್ತು ಎಸ್ಕಾರ್ಟ್ ವ್ಯವಸ್ಥೆಯೊಂದಿಗೆ ಶಾಸಕರನ್ನು ನೇರವಾಗಿ ರಾಮನಗರದ ಬಿಡದಿಯಲ್ಲಿರುವ ವಂಡರ್ ಲಾ ರೆಸಾರ್ಟ್ಗೆ ಕರೆದೊಯ್ಯಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನಾನು ಒಡಿಶಾ ಶಾಸಕರನ್ನು ಕರೆಸಿಲ್ಲ, ಅವರೇ ಬೆಂಗಳೂರಿಗೆ ಬಂದಿದ್ದಾರೆ. ಒಡಿಶಾ ಕೆಪಿಸಿಸಿ ಅಧ್ಯಕ್ಷರು ಕರೆ ಮಾಡಿ ನಮ್ಮ ಶಾಸಕರು ಬೆಂಗಳೂರಿಗೆ ಬರುತ್ತಿದ್ದಾರೆ ಎಂದರು. ಹೀಗಾಗಿ ಅವರು ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದೇವೆ ಅಷ್ಟೇ ಎಂದರು. ನಾನು ಇದನ್ನು ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದ ಸಮಯದಿಂದಲೂ ಮಾಡಿಕೊಂಡು ಬರುತ್ತಿದ್ದೇನೆ ಎಂದರು.
ತಂಬಾಕು ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರ
ಕರ್ನಾಟಕ ಸೇರಿದಂತೆ ದೇಶಾದ್ಯಂತ ತಂಬಾಕು ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ. ಈ ಸಂಬಂಧ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಇಂದು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವರಾದ ಪಿಯೂಷ್ ಗೋಯಲ್ ಅವರ ಜೊತೆ ಮಾತುಕತೆ ನಡೆಸಿದರು. ಸಚಿವ ಗೋಯಲ್ ಅವರಿಗೆ ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಮನವರಿಕೆ ಮಾಡಿ ಕೊಟ್ಟರು. ಹೀಗಾಗಿ ಸೋಮವಾರದಿಂದಲೇ ತಂಬಾಕು ಖರೀದಿಗೆ ಸಚಿವ ಪಿಯೂಷ್ ಗೋಯಲ್ ಸೂಚನೆ ನೀಡಿದ್ದಾರೆ. ತಂಬಾಕು ಖರೀದಿ ಜೊತೆಗೆ, ವಿದೇಶ ಮಾರುಕಟ್ಟೆಗಳಿಗೆ ರಫ್ತು, ಹೊಸ ವಿದೇಶಿ ಮಾರುಕಟ್ಟೆಗಳ ಅನ್ವೇಷಣೆ ಸೇರಿದಂತೆ ಬೆಳೆಗಾರರ ಬೇಡಿಕೆಗಳಿಗೆ ಸಚಿವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಯುಗಾದಿ ಬೋನಸ್: ರೈತರಿಗೆ ಲೀಟರ್ಗೆ 1 ರೂ. ಹೆಚ್ಚುವರಿ ಹಣ
2025-26ನೇ ಸಾಲಿನಲ್ಲಿ ಬಮೂಲ್ 3400 ಕೋಟಿ ರೂ. ವಹಿವಾಟು ಮಾಡಿದ್ದು 14.50 ಕೋಟಿ ನಷ್ಟದಲ್ಲಿದ್ದ ಸಂಸ್ಥೆಯು ಈ ವರ್ಷ 60 ಕೋಟಿ ಲಾಭ ಕಂಡಿದೆ. ಈ ಹಿನ್ನೆಲೆಯಲ್ಲಿ ಯುಗಾದಿ ಹಬ್ಬದ ಬೋನಸ್ ಆಗಿ ಸಂಸ್ಥೆಗೆ ಹಾಲು ನೀಡಿರುವ 1,27,644 ರೈತರಿಗೆ ಪ್ರತಿ ಲೀಟರ್ ಗೆ 1 ರೂ. ಹೆಚ್ಚುವರಿ ಹಣವನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ ಸುರೇಶ್ ತಿಳಿಸಿದರು. ಕಳೆದ ವರ್ಷ ನಮ್ಮ ಒಕ್ಕೂಟ 2900 ಕೋಟಿ ವಹಿವಾಟು ಮಾಡಿದ್ದು, ಈ ವರ್ಷ ಮಾರ್ಚ್ 31ರ ವೇಳೆಗೆ 3,400 ಕೋಟಿಯಷ್ಟು ವಹಿವಾಟು ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದರು.
ಗ್ಯಾಸ್ ಸಿಗುತ್ತಿಲ್ಲವೆಂದು ಮರಗಳನ್ನು ಅಕ್ರಮವಾಗಿ ಕಡಿದರೆ ಅಧಿಕಾರಿಗಳೇ ಹೊಣೆ
ರಾಜ್ಯದಲ್ಲಿ LPG ಸಿಲಿಂಡರ್ ಕೊರತೆ ಹಿನ್ನೆಲೆಯಲ್ಲಿ ಕೆಲ ಹೋಟೆಲ್ ಉದ್ಯಮದವರು ಆಹಾರ ತಯಾರಿಕೆಗಾಗಿ ಕಟ್ಟಿಗೆಗಳನ್ನು ಬಳಸುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಮರಗಳನ್ನು ಕಡಿದು ಕಟ್ಟಿಗೆ ಬಳಸುವ ಪ್ರವೃತ್ತಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಕ್ರಮ ಮರ ಕಡಿತ ತಡೆಯಲು ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಸೌದೆಯ ಬಳಕೆ ಹೆಚ್ಚಾಗುವ ಸಾಧ್ಯತೆಯಿದ್ದು ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಕಾಡಿನ ಮರಗಳನ್ನು ಕಡಿಯುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಹೈ-ಅಲರ್ಟ್ ಘೋಷಿಸಿದೆ. ಗ್ಯಾಸ್ ಸಿಗುತ್ತಿಲ್ಲವೆಂದು ಮರಗಳನ್ನು ಅಕ್ರಮವಾಗಿ ಕಡಿದರೆ ಸಂಬಂಧಿತ ಪ್ರದೇಶದ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
