ಚಾಮರಾಜನಗರ:
ರಾತ್ರಿ ಸುರಿದ ಮಳೆಯಿಂದ ರಾಮನಗರ ಬಳಿ ರಸ್ತೆ ಜಲಾವೃತಗೊಂಡಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸರಿಪಡಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಹೇಳಿದರು.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ (ಎಂಎಂ ಹಿಲ್ಸ್) ಹೆಲಿಪ್ಯಾಡ್‌ನಲ್ಲಿ ಮುಖ್ಯಮಂತ್ರಿಗಳು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಮಳೆ ಬಂದಾಗ ಸಣ್ಣಪುಟ್ಟ ಸಮಸ್ಯೆಗಳಾಗುವುದು ಸಹಜ ಎಂದರು. ಈ ಸಮಸ್ಯೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪರಿಹರಿಸುತ್ತದೆ ಎಂದು ಹೇಳಿದರು. ಎಂಟು ಸಾವಿರ ಕೋಟಿ ಖರ್ಚು ಮಾಡಿ ಇಡೀ ದೇಶವನ್ನೇ ಮೈಸೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗಿದೆ. ಈ ಬಗ್ಗೆ ಎಲ್ಲರೂ ಹೆಮ್ಮೆಪಡಬೇಕು ಎಂದರು.
ವಿಶೇಷ ಪ್ಯಾಕೇಜ್
ಚಾಮರಾಜನಗರ ವಿಶೇಷ ಪ್ಯಾಕೇಜ್ ಬಗ್ಗೆ ಡಿಸಿ ಅವರು ವರದಿ ನೀಡಿದ್ದು ನಾಳೆ ನಾಡಿದ್ದರಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗುವುದು ಎಂದರು
ಬೇರೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿರುವುದರಿಂದ ಮಾಜಿ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಅವರು ಪ್ರತಿಮೆ ಅನಾವರಣಕ್ಕೆ ಬರಲಾಗಲಿಲ್ಲ ಎಂದರು.
ಉರಿಗೌಡ, ನಂಜೇಗೌಡ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.