• ಆದಾಯ ನಷ್ಟವಾದರೂ ಸರಿ ನಮ್ಮ ಮಾತಿಂದ ಹಿಂದೆ ಸರಿಯುವ ಮಾತೇ ಇಲ್ಲ
• ಆನ್‌ಲೈನ್ ಖಾತೆಯಲ್ಲಿ ಇತರೆ ಎಂಬ ಕ್ಯಾಟಗರಿಯನ್ನು ತೆಗೆಯಲೇಬೇಕು
• ಆನ್‌ಲೈನ್ ಖಾತಾ ಇಂಟಗ್ರೇಷನ್ ಮೂಲಕ ಅಕ್ರಮಕ್ಕೆ ಕಡಿವಾಣ
• ಸಬ್ ರಿಜಿಸ್ಟ್ರಾರ್ ವರ್ಗಾವಣೆಗೂ ಸಚಿವಾಲಯಕ್ಕೂ ಸಂಬಂಧ ಇಲ್ಲ
ಬೆಂಗಳೂರು ಜುಲೈ 22: ಕೃಷಿಭೂಮಿ ಪರಿವರ್ತೆ ಆಗದಿದ್ದರೂ ನಿವೇಶನಗಳಾಗಿ ನೋಂದಣಿಯಾಗುತ್ತಿದ್ದು, ಇಂತಹ ಅನಧಿಕೃತ ಬಡಾವಣೆಗಳ ನೋಂದಣಿಗೆ ಕಡಿವಾಣ ಹಾಕುವ ನಿರ್ಧಾರದಿಂದ ನಮ್ಮ ಸರ್ಕಾರ ಹಿಂದೆ ಸರಿಯುವುದಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಸೋಮವಾರ ಸಬ್ ರಿಜಿಸ್ಟ್ರಾರ್‌ಗಳ ವರ್ಗಾವಣೆ ಹಾಗೂ ಅನಧಿಕೃತ ಬಡಾವಣೆಗಳ ನೋಂದಣಿಗೆ ಸಂಬಂಧಿಸಿ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, “ಕಾನೂನು ಬದ್ಧವಾಗಿ ಪರಿವರ್ತನೆ ಆಗದಿದ್ದರೂ ಕೃಷಿಭೂಮಿಗಳನ್ನು ನಿವೇಶನಗಳನ್ನಾಗಿ ಅನಧಿಕೃತ ನೋಂದಣಿ ಮಾಡಲಾಗುತ್ತಿದೆ ಎಂಬುದು ನಿಜ. ಹೀಗೆ ಹೇಳಲು ನಮಗೂ ವಿಷಾದವಿದೆ. ಏಕೆಂದರೆ, ಕೆಲವರು ಅಕ್ರಮವನ್ನು ಕ್ರಮಬದ್ಧವಾಗಿ ಮಾಡುತ್ತಿದ್ದಾರೆ. ಆದರೆ, ಕಳೆದ ಅಧಿವೇಶನದಲ್ಲಿ ನೀಡಿದ ಮಾತಿನಂತೆ ಈ ಅಕ್ರಮಗಳನ್ನು ತಡೆಯಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಭರವಸೆ ನೀಡಿದರು.
“ಈ ಅಕ್ರಮವನ್ನು ನಿಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರೂ ಸಹ ಸಂಕಲ್ಪ ಮಾಡಿದ್ದಾರೆ. ಆದರೆ, ನಾನೇ ಹೋಗಿ ನಿಲ್ಲಿಸುತ್ತೇನೆ ಎಂಬುದು ಸಾಧ್ಯವಿಲ್ಲ. ಏಕೆಂದರೆ ನಾವು ಚಾಪೆ ಕೆಳಗೆ ನುಸುಳಿದರೆ, ರಂಗೋಲಿ ಕೆಳಗೆ ನುಗ್ಗೋ ವ್ಯವಸ್ಥೆಗಳು ನಮ್ಮಲ್ಲಿವೆ. ಹೀಗಾಗಿ ಈ ಬಗ್ಗೆ ಅಧಿಕಾರಗಳ ಜೊತೆ ಚರ್ಚಿಸಿ ಕಾನೂನುಬದ್ಧವಾಗಿಯೇ ಎಲ್ಲಕ್ಕೂ ಕಡಿವಾಣ ಹಾಕಲಾಗುವುದು” ಎಂದರು.
ಮುಂದುವರೆದು, “ನೋಂದಣಿ ಮಾಡುವಾಗ ಇತರೆ ಎಂಬ ಕ್ಯಾಟಗರಿ ಇದೆ. ಕೃಷಿ ಭೂಮಿಯಲ್ಲಿನಿವೇಶನ ನೋಂದಣಿ ಮಾಡುವಾಗ ಇತರೆ ಎಂಬ ಆಯ್ಕೆ ನೀಡಲಾಗಿರುತ್ತದೆ. ಗ್ರಾಮಠಾಣಾ, ಆಶ್ರಯ ನಿವೇಶನಕ್ಕಾಗಿ ಇತರೆ ಕ್ಯಾಟಗರಿ ನೀಡಿದ್ರೆ ಅದರಲ್ಲಿ ಕೃಷಿಭೂಮಿಯನ್ನು ನೋಂದಣಿ ಮಾಡುತ್ತಿದ್ದಾರೆ. ಇದನ್ನ ನಿಲ್ಲಿಸಲು ಆನ್‌ಲೈನ್ ಖಾತಾ ಇಂಟಗ್ರೇಷನ್ ಮಾಡಬೇಕು. ಅಂದ್ರೆ ಯಾರಿಗೆ ಗ್ರಾಮ ಪಂಚಾಯಿತಿ ಅಥವಾ ಬಿಬಿಎಂಪಿ ಯಂತಹ ಮುನ್ಸಿಪಾಲಿಟಿ ಇ ಖಾತಾ ಕೊಟ್ಟಿರತ್ತೋ ಅದು ನೇರವಾಗಿ ನಮ್ಮ ಸಿಸ್ಟಂಗೆ ಲಿಂಕ್ ಮಾಡಿದ್ರೆ ಮಾತ್ರ ಇಂತಹ ಭೋಗಸ್ ಖಾತೆ ನೋಂದಣಿಯನ್ನು ತಡೆಯಬಹುದು.
ಈ ಬಗ್ಗೆಯೇ ಒಂದು ಕಾಯ್ದೆಯನ್ನು ಸಿದ್ದಪಡಿಸಿ ಕಳೆದ ಅಧಿವೇಶನದಲ್ಲಿ ಮಂಡಿಸಲಾಗಿತ್ತು. ಆ ಕಾಯ್ದೆ ರಾಜ್ಯಪಾಲರ ಒಪ್ಪಿಗೆ ಪಡೆಯುವುದು ತಡವಾಗಿತ್ತು. ಅಲ್ಲದೆ, ಮೂರು ತಿಂಗಳ ಚುನಾವಣೆಯ ಕಾರಣಕ್ಕೆ ಈ ಕಾಯ್ದೆಯನ್ನು ಜಾರಿಗೊಳಿಸುವುದು ಸಾಧ್ಯವಾಗಿಲ್ಲ. ಹೀಗಾಗಿ ವಿಳಂಬವಾಗಿದೆ. ಆದರೂ, ನಾವು ಮಾತಿಗೆ ಬದ್ಧರಿದ್ದೇವೆ. ಗ್ರಾಮ ಪಂಚಾಯಿತಿ ಅಥವಾ ಮುನ್ಸಿಪಾಲಿಟಿ ಬಿಬಿಎಂಪಿಯಲ್ಲಿ ಖಾತೆ ಮಾಡಿಕೊಂಡು ಬಂದರೆ, ನಿಜವಾದ ಖಾತೆ ಇದ್ದರೆ ಮಾತ್ರ ಇನ್ನುಮುಂದೆ ನಾವು ನೋಂದಣಿ ಮಾಡಿಕೊಡುತ್ತೇವೆ.
ಆದರೆ, ಖಾತೆ ಅಸಲಿಯೇ-ನಕಲಿಯೇ ಎಂಬ ನಿರ್ಧಾರವನ್ನು ಮುನ್ಸಿಪಾಲಿಟಿಯೇ ತೆಗೆದುಕೊಳ್ಳಬೇಕು. ಆನ್‌ಲೈನ್ ಖಾತೆಯಲ್ಲಿ ಇತರೆ ಎಂಬ ಕ್ಯಾಟಗರಿಯನ್ನು ತೆಗೆಯಲೇಬೇಕು ಎಂಬುದು ನಮ್ಮ ತೀರ್ಮಾನ. ಇದರಿಂದ ಸರ್ಕಾರಕ್ಕೆ ಆದಾಯ ನಷ್ಟವಾಗುತ್ತದೆ. ಆದಾಯ ನಷ್ಟವಾದರೂ ಸರಿ ನಮ್ಮ ಮಾತಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಸಬ್ ರಿಜಿಸ್ಟ್ರಾರ್ ವರ್ಗಾವಣೆಗೂ ಸಚಿವಾಲಯಕ್ಕೂ ಸಂಬಂಧ ಇಲ್ಲ: ಸಬ್ ರಿಜಿಸ್ಟ್ರಾರ್ ವರ್ಗಾವಣೆಗೂ ಸಚಿವಾಲಯಕ್ಕೂ ಯಾವುದೇ ಸಂಬಂಧ ಇಲ್ಲ. ಆ ಗೋಜಿಗೆ ಹೋಗಲೇಬಾರದು ಎಂಬ ಕಾರಣಕ್ಕೆ ಈ ಬಾರಿ ಬಿಎಂಆರ್‌ಡಿಎ ವ್ಯಾಪ್ತಿಯಲ್ಲಿ ಸಬ್ ರಿಜಿಸ್ಟ್ರಾರ್ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ನಡೆಸಬೇಕು ಎಂದು ಕ್ಯಾಬಿನೆಟ್‌ನಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಇದಲ್ಲದೆ, ಕಳೆದ 8 ವರ್ಷದಲ್ಲಿ 5 ವರ್ಷ ಬೆಂಗಳೂರಲ್ಲಿ ಕೆಲಸ ಮಾಡಿದ್ರೆ, ಅಂತವರನ್ನೂ ಹೊರಗೆ ಕಳುಹಿಸಲು ಕ್ಯಾಬಿನ್‌ಟ್‌ನಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಲ್ಲಿ ನಮ್ಮ ಯಾವ ಪಾತ್ರವೂ ಇಲ್ಲ. ಕೆಲವರು ಪಟ್ಟಭದ್ರ ಸ್ಥಾನದಲ್ಲಿದ್ದು ಇವೆಲ್ಲ ನಡೆಸ್ತಾ ಇದ್ದಾರೆ. ಇವರನ್ನು ಹೊರಗೆ ಹಾಕಲು ಸ್ವತಃ ಸಿಎಂ ಸಿದ್ದರಾಮಯ್ಯ ಅವರೂ ಸೂಚಿಸಿದ್ದಾರೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.