ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರಿನಲ್ಲಿ ಗುತ್ತಿಗೆದಾರರ ಬಿಲ್ ಬಾಕಿ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜಿಬಿಎ ಕಚೇರಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ಪಾಲಿಕೆಗಳಲ್ಲಿ ಕ್ರಾಂತಿಕಾರಿ ತೀರ್ಮಾನಗಳನ್ನು ತೆಗೆದುಕೊಂಡು ಬಿಲ್ ವಿತರಣೆ ಪ್ರಕ್ರಿಯೆಯನ್ನು ಸುಧಾರಿಸಿದ್ದೇವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ಬಾಕಿ ಬಿಲ್ ಸಮಸ್ಯೆ ಇಲ್ಲ. ಬೇರೆ ಪ್ರದೇಶಗಳಲ್ಲಿ ಕೆಲ ಗುತ್ತಿಗೆದಾರರು ಈ ಕುರಿತು ಪ್ರಶ್ನಿಸುತ್ತಿರಬಹುದು,” ಎಂದು ಹೇಳಿದರು.
ಸುಮಾರು 90% ಸಮಸ್ಯೆಗಳನ್ನು ಬಗೆಹರಿಸಿದ್ದು, ತಾಂತ್ರಿಕ ಕಾರಣಗಳಿಂದಾಗಿ 10% ಮಾತ್ರ ಬಾಕಿ ಉಳಿದಿವೆ ಎಂದು ಅವರು ವಿವರಿಸಿದರು.
ಏಪ್ರಿಲ್ ವೇಳೆಗೆ ಕಾಮಗಾರಿಗಳು ಪೂರ್ಣಗೊಳ್ಳುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, “ಬೆಂಗಳೂರು ರಸ್ತೆ ಕಾಮಗಾರಿಗಳ ವಿಚಾರದಲ್ಲಿ ಯಾವ ಗುತ್ತಿಗೆದಾರರಿಗೂ ಬಾಕಿ ಬಿಲ್ ಇಲ್ಲ,” ಎಂದು ಪುನರುಚ್ಚರಿಸಿದರು.
ರಾಜ್ಯದಲ್ಲಿ ಗುತ್ತಿಗೆದಾರರ ಪಾವತಿ ವಿಚಾರವಾಗಿ ನಡೆಯುತ್ತಿರುವ ಚರ್ಚೆಗಳ ಮಧ್ಯೆ, ಬೆಂಗಳೂರಿನಲ್ಲಿ ಆಡಳಿತಾತ್ಮಕವಾಗಿ ಸಮಸ್ಯೆಯನ್ನು ಬಹುತೇಕ ಪರಿಹರಿಸಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.
