ಹೊರಗುತ್ತಿಗೆ ಸಿಬ್ಬಂದಿ ಸೇವೆ ಮುಂದುವರಿಕೆ ಕುರಿತು ಸರ್ಕಾರದಿಂದ ಯಾವುದೇ ಆದೇಶ ಇಲ್ಲ: ನಕಲಿ ಜ್ಞಾಪನದ ಬಗ್ಗೆ ಸ್ಪಷ್ಟನೆ
ಬೆಂಗಳೂರು: ಹೊರಗುತ್ತಿಗೆ ಆಧಾರಿತ ಸಿಬ್ಬಂದಿಯ ಸೇವೆಯನ್ನು ಮುಂದುವರೆಸುವ ಬಗ್ಗೆ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿದೆ.
ಆರ್ಥಿಕ ಇಲಾಖೆಯ ಹೆಸರಿನಲ್ಲಿ ಅಧಿಕೃತ ಜ್ಞಾಪನದ ಮಾದರಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಬೆಳಕಿಗೆ ಬಂದಿದೆ. ಸಂ.ಆಇ/ಸೇನಿ/08/2026 ದಿನಾಂಕ: 24-03-2026 ಎಂಬ ಸಂಖ್ಯೆಯನ್ನು ಬಳಸಿಕೊಂಡು ತಯಾರಿಸಲಾದ ಈ ಜ್ಞಾಪನ ಪತ್ರ ಸಂಪೂರ್ಣವಾಗಿ ಕಳ್ಳದಾಖಲೆ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಕಲಿ ಮಾಹಿತಿಯನ್ನು ಪರಿಶೀಲನೆ ಮಾಡದೆ ಕೆಲವು ಮಾಧ್ಯಮಗಳು, ಆನ್ಲೈನ್ ಪೋರ್ಟಲ್ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದಕ್ಕೂ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ.
ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ ಎಂ. ರಾಜಮ್ಮ ಪ್ರಕಟಣೆಯಲ್ಲಿ, ಸರ್ಕಾರದಿಂದ ಇಂತಹ ಯಾವುದೇ ಆದೇಶ ಅಥವಾ ಅಧಿಕೃತ ಜ್ಞಾಪನ ಹೊರಡಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹರಿದಾಡುತ್ತಿರುವ ದಾಖಲೆ ಅಧಿಕೃತವಲ್ಲ, ಅದು ನಕಲಿ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರು ಮತ್ತು ಮಾಧ್ಯಮಗಳು ಯಾವುದೇ ಮಾಹಿತಿಯನ್ನು ಹಂಚುವ ಮೊದಲು ಅದರ ನೈಜತೆಯನ್ನು ಪರಿಶೀಲಿಸುವಂತೆ ಇಲಾಖೆ ಮನವಿ ಮಾಡಿದೆ.
