
No increase in tax on petrol-diesel — Karnataka Chief Minister Siddaramaiah
ಬಡವರ-ಮಧ್ಯಮವರ್ಗದವರ ಮೇಲೆ ತೆರಿಗೆ ಹೊರೆಯಾಗದಂತೆ ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಣ– ಮುಖ್ಯಮಂತ್ರಿ ಸಿದ್ದರಾಮಯ್ಯ
ತೆರಿಗೆಯ ಹೊರೆಯಿಂದ ಮುಕ್ತರಾದ ಬಡವರು-ಮಧ್ಯಮ ವರ್ಗದವರು
ವಿತ್ತೀಯ ಶಿಸ್ತು ಕಾಪಾಡಿಕೊಂಡು ಸವಾಲು ಗೆದ್ದಿದ್ದೇವೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು:
ಗ್ಯಾರಂಟಿ ಯೋಜನೆಗಳಿಗೆ ಪ್ರಸಕ್ತ ಸಾಲಿಗೆ 35,410 ಕೋಟಿ ರೂ. ಅಗತ್ಯವಿದ್ದು, ಜನಸಾಮಾನ್ಯರಿಗೆ ಹೊರೆಯಾಗದಂತೆ ಸಂಪನ್ಮೂಲ ಕ್ರೋಢೀಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಅವರು ಇಂದು ತಮ್ಮ 14 ನೇ ಆಯವ್ಯಯ ಮಂಡಿಸಿದ ನಂತರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳಿಗೆ 13,500 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ಹೆಚ್ಚಳ ಹಾಗೂ 8000 ಕೋಟಿ ರೂ. ಹೆಚ್ಚುವರಿ ಸಾಲದ ಮೂಲಕ ಮತ್ತು ಉಳಿದ ಸಂಪನ್ಮೂಲವನ್ನು ಯೋಜನೆಗಳ ಆದ್ಯತೆಯನ್ನು ನಿಗದಿಪಡಿಸುವ ಮೂಲಕ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಈ ಯೋಜನೆಗಳ ಅನುಷ್ಠಾನಕ್ಕಾಗಿ ಬಡವರ-ಮಧ್ಯಮ ವರ್ಗದವರ ಮೇಲೆ ಯಾವುದೇ ತೆರಿಗೆ ಹಾಕಿಲ್ಲ, ಜನರಿಗೆ ಹೊರೆ ಆಗಬಾರದು ಎನ್ನುವ ಕಾರಣಕ್ಕೇ ಪೆಟ್ರೋಲ್ ಡೀಸೆಲ್ ಮೇಲೆ ತೆರಿಗೆ ಹಾಕಲಿಲ್ಲ, ಬೆಲೆ ಏರಿಕೆ ಮಾಡಿಲ್ಲ ಎಂದರು.
ವಿತ್ತೀಯ ಹೊಣೆಗಾರಿಕೆ ಕಾಯ್ದೆಯಡಿ 3 ಮಾನದಂಡಗಳನ್ನು ಪಾಲಿಸಬೇಕಿದ್ದು, ಈ ಪೈಕಿ 2023-24 ರ ಬಜೆಟ್ ನಲ್ಲಿ 2 ಮಾನದಂಡಗಳನ್ನು ಕಾಯ್ದುಕೊಳ್ಳುವ ಮೂಲಕ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಲಾಗಿದೆ ವಿತ್ತೀಯ ಹೊಣೆಗಾರಿಕೆ ಕಾಯ್ದೆಯಡಿ ವಿತ್ತೀಯ ಕೊರತೆ ಶೇ.3 ರಷ್ಟಿರಬೇಕು , ಸಾಲದ ಪ್ರಮಾಣ ಜಿಡಿಪಿಯ ಶೇ.25 %ರ ಒಳಗೆ ಇರಬೇಕು. ಉಳಿತಾಯ ಬಜೆಟ್ (revenue surplus) ಇರಬೇಕು ಎನ್ನುವ ಮಾನದಂಡಗಳಿವೆ . ವಿತ್ತೀಯ ಕೊರತೆ ಶೇ. 2.6 ರಷ್ಟಿದ್ದು , ಸಾಲ ಜಿಡಿಪಿಯ ಶೇ. 22.3 % ರಷ್ಟಿದೆ. ಹೀಗೆ 2 ಮಾನದಂಡಗಳನ್ನು ಪಾಲಿಸಿ ವಿತ್ತೀಯ ಶಿಸ್ತನ್ನು ಕಾಯ್ದುಕೊಳ್ಳಲಾಗಿದೆ ಎಂದು ವಿವರಿಸಿದರು.
ಈ ಆಯವ್ಯಯಲ್ಲಿ 2,50,933 ಕೋಟಿ ರೂ. ರಾಜಸ್ವ ವೆಚ್ಚ , ಬಂಡವಾಳ ವೆಚ್ಚ 54374 ಕೋಟಿ ರೂ.ಗಳಾಗಿದ್ದು, , 2022-23 ಹೋಲಿಸಿದರೆ ಶೇ,23 ರಷ್ಟು ರಾಜಸ್ವ ವೆಚ್ಚ ಹಾಗೂ ಶೇ.16 ರಷ್ಟು ಬಂಡವಾಳ ವೆಚ್ಚ ಹೆಚ್ಚಾಗುತ್ತದೆ ಎಂದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 2021-22 ರಲ್ಲಿ ವಿತ್ತೀಯ ಕೊರತೆ 14,699.14 ಕೋಟಿ ರೂ.ಗಳಷ್ಟಿತ್ತು. ನಮ್ಮ ಸರ್ಕಾರದ ರಾಜಸ್ವ ಕೊರತೆ 12,523 ಕೋಟಿ ರಷ್ಟಿದೆ , ವಿತ್ತೀಯ ಕೊರತೆ 66,646 ಕೋಟಿ ರೂ. ಇದು ಜಿಎಸ್ ಡಿಪಿಯ ಶೇ. 2.6 ರಷ್ಟಿದೆ. ರಾಜ್ಯದ ಹೊಣೆಗಾರಿಕೆ 5,71,665 ಕೋಟಿ ರೂ.ಗಳಷ್ಟಿದ್ದು, ಇದು ಜಿಎಸ್ ಡಿಪಿ ಶೇ. 22.3 ರಷ್ಟಿದೆ. 2023-24 ಕ್ಕೆ ರಾಜ್ಯವು ಪಡೆಯುವ ಸಾಲ 85818 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.
ವಾಣಿಜ್ಯ ತೆರಿಗೆ ಫೆಬ್ರವರಿ ಆಯವ್ಯಯಕ್ಕಿಂತ 4000 ಕೋಟಿ ರೂ. ಹೆಚ್ಚುವರಿ ಗುರಿ ನಿಗದಿಪಡಿಸಲಾಗಿದೆ. ಅಬಕಾರಿ ಸುಂಕ ಗುರಿ 1000 ಕೋಟಿ ರೂ. ಹೆಚ್ಚಳ ಮಾಡಿದೆ. ಇದನ್ನು ಸೇರಿದಂತೆ ತೆರಿಗೆ ಸಂಗ್ರಹದ ಒಟ್ಟಾರೆ ಗುರಿಯನ್ನು 13,500 ಕೋಟಿ ರೂ.ಗಳಷ್ಟು ಹೆಚ್ಚಳ ಮಾಡಿದೆ ಎಂದರು.
ಗಂಡಸ್ರು ಮಾತ್ರ ಕುಡಿಯೋದಾ?
ವ್ಹಿಸ್ಕಿ ಮತ್ತು ಬಿಯರ್ ಮೇಲೆ ತೆರಿಗೆ ಹೆಚ್ಚಿಸಿದ್ದಕ್ಕೆ ಪತ್ರಕರ್ತರು, “ನೀವು ಮಹಿಳಾ ಪರ ಬಜೆಟ್ ಮಂಡಿಸಿ ಪುರುಷ ವಿರೋಧಿ ಆಗ್ತಿದ್ದೀರಿ” ಎಂದು ಹಾಸ್ಯ ಮಾಡಿದರು. ಹಾಸ್ಯದ ದಾಟಿಯಲ್ಲೇ ಉತ್ತರಿಸಿದ ಮುಖ್ಯಮಂತ್ರಿಗಳು ಗಂಡುಸ್ರು ಮಾತ್ರ ಕುಡಿಯೋದಾ ಎನ್ನುತ್ತಾ, ರಾಜ್ಯದ ಕಲ್ಯಾಣಕ್ಕಾಗಿ ಕುಡಿಯುವವರು ತಮ್ಮ ಪಾಲನ್ನೂ ಕೊಡಲಿ ಬಿಡಿ ಎಂದರು.