ಬೆಂಗಳೂರು:
ನಮ್ಮ ಸರ್ಕಾರದಲ್ಲಿ ಸಾಹಿತಿಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆತಂಕ ಪಡಬೇಕಾಗಿಲ್ಲ . ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ರಕ್ಷಣೆ ಮಾಡುತ್ತೇವೆ. ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಯಾರೂ ಹೆದರಬೇಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಹಿತಿಗಳಿಗೆ ಅಭಯ ನೀಡಿದರು.
ಅವರು ಇಂದು ಕರ್ನಾಟಕ ರಾಜ್ಯ ಬರಹಗಾರರು ಹಾಗೂ ಪ್ರಕಾಶಕರ ಸಂಘದ 20 ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಸಾಹಿತಿಗಳ ಬಗ್ಗೆ ಅಪಾರ ಗೌರವ ಇರುವುದಾಗಿ ತಿಳಿಸಿದ ಮುಖ್ಯ ಮಂತ್ರಿಗಳು ಸಾಹಿತಿಗಳು ಸಮಾಜವನ್ನು ತಿದ್ದುವಂಥವರು ಎಂದರು.
ಅಧಿಕಾರದಲ್ಲಿದ್ದಾಗ ನೀಡಿದ್ದ ಭರವಸೆಗಳನ್ನು ಈಡೇರಿಸದಿದ್ದವರು ಈಗ ಟೀಕೆ ಗಳನ್ನು ಮಾಡುತ್ತಿದ್ದಾರೆ.
15 ಲಕ್ಷ ರೂ.ಗಳನ್ನು ಪ್ರತಿ ಮನೆಗೆ ಕೊಡುತ್ತೇನೆ ಎಂದವರು 9 ವರ್ಷಗಳಾದರೂ ಈಡೇರಿಸಿಲ್ಲ. ಆದಾಯ ದುಪ್ಪಟ್ಟು ಮಾಡುತ್ತೇವೆ, ನಾ ಖಾವೂಂಗಾ, ನಾ ಖಾನೇದೂಂಗ ಎಂದವರು ಯಾರು? ಅಚ್ಛೇ ದಿನ್ ತಂದುಕೊಟ್ಟಿದ್ದಾರೆಯೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ ಗಾಂಧಿ ಭವನದಲ್ಲಿ ಆಯೋಜಿಸಿದ್ದ 20ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ @siddaramaiah ಅವರು ಪಾಲ್ಗೊಂಡು, ಪ್ರಶಸ್ತಿ ನೀಡಿ ಗೌರವಿಸಿದರು. pic.twitter.com/rv27kHXcdx
— CM of Karnataka (@CMofKarnataka) June 24, 2023
ಐದು ಗ್ಯಾರಂಟಿ ಗಳನ್ನು ಈಡೇರಿಸದಿದ್ದರೆ ಅಧಿವೇಶನದಲ್ಲಿ ಧರಣಿ ಕೂರುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದು, ಅವರು ನೀಡಿದ್ದ ಪ್ರಣಾಳಿಕೆಯಲ್ಲಿ ಒಂದು ಲಕ್ಷ ದವರಿಗಿನ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದ್ದರು. ಹತ್ತು ಗಂಟೆ ವಿದ್ಯುತ್ ನೀಡುತ್ತೇವೆ, ನೀರಾವರಿಗೆ ಒಂದೂವರೆ ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಎಂದೆಲ್ಲಾ ಹೇಳಿದ್ದರು. ಆದರೆ ಅವುಗಳನ್ನು ಜಾರಿ ಮಾಡದವರು ಈಗ ಧರಣಿ ಕುಳಿತುಕೊಳ್ಳುವುದಾಗಿ ಹೇಳುತ್ತಾರೆ ಎಂದು ವ್ಯಂಗವಾಡಿದರು. ಈ ಮೂಲಕ ಅವರು ಜನಗಳಿಗೆ ತಪ್ಪು ಮಾಹಿತಿ ನೀಡುತ್ತಾರೆ ಎಂದರು.
ಜನರ ಹಣ ವನ್ನು ಖರ್ಚು ಮಾಡುವಾಗ ಎಚ್ಚರಿಕೆ ಅಗತ್ಯ
ಕೇಂದ್ರ ಸರ್ಕಾರ ಲಕ್ಷಾಂತರ ಟನ್ ಅಕ್ಕಿ ಇಟ್ಟುಕೊಂಡು ಕುಳಿತಿದೆ. ಆದರೆ ಅನ್ನಭಾಗ್ಯಕ್ಕೆ ಮಾತ್ರ ಕೊಡುವುದಿಲ್ಲ ಎಂದು ಪತ್ರ ಬರೆದಿದ್ದಾರೆ. ಈಗ ಧರಣಿ ಮಾಡುತ್ತೇವೆ ಎಂದು ಅರ್ಥವಿಲ್ಲದ ಮಾತಾಡುತ್ತಿದ್ದಾರೆ. ಒಂದು ತಿಂಗಳಿಗೆ 840 ಕೋಟಿ ರೂ. ಅಕ್ಕಿ ಅಗತ್ಯವಿದೆ. ಅಷ್ಟು ಮೊತ್ತ ನೀಡಲು ನಾವು ಸಿದ್ದವಿದ್ದೇವೆ ಎಂದು ಸ್ಪಷ್ಟ ಪಡಿಸಿದ್ದೇವೆ ಎಂದರು.
ಮಹಿಳೆಯರಿಗೆ ಗೃಹ ಲಕ್ಷ್ಮೀ ಯೋಜನೆಯಡಿ ಅರ್ಜಿ ಕರೆಯಲಾಗಿದೆ. ತೆರಿಗೆ ಹಣ ಒಬ್ಬರ ಖಾಸಗಿ ಸ್ವತ್ತಲ್ಲ. ಜನರ ಹಣವನ್ನು ಖರ್ಚು ಮಾಡುವಾಗ ಎಚ್ಚರಿಕೆ ಅಗತ್ಯ. 200 ಯೂನಿಟ್ ಉಚಿತ ವಿದ್ಯುತ್ ನೀಡುವ ಯೋಜನೆಗೆ 200 ಯೂನಿಟ್ ಗೆ ಕೊಡಬೇಕು ಎನ್ನುತ್ತಾರೆ. ವರ್ಷಕ್ಕೆ ಸಾರಾಸರಿ 70 ಯೂನಿಟ್ ಖರ್ಚು ಮಾಡುವವರಿಗೆ 200 ಯೂನಿಟ್ ಉಚಿತ ಕೊಟ್ಟರೆ ಅದು ದುರುಪಯೋಗ ಮತ್ತು ದುರ್ಬಳಕೆಯಲ್ಲವೇ ಎಂದು ಪ್ರಶ್ನಿಸಿದರು.
ಲೇಖಕರ ಬರವಣಿಗೆಗಳು ಸಮಾಜಮುಖಿಯಾಗಿರಬೇಕು
ಲೇಖಕರ ಬರವಣಿಗೆಗಳು ಸಮಾಜಮುಖಿಯಾಗಿರಬೇಕು. ಸಮಾಜ ನನಗೇನು ನೀಡಿದೆ ಎಂದು ಪ್ರಶ್ನಿಸುವ ಬದಲು ಸಮಾಜಕ್ಕೆ ನನ್ನ ಕೊಡುಗೆಯೇನು ಎಂದು ಪ್ರಶ್ನಿಸಿಕೊಳ್ಳಬೇಕು. ಈ ಪ್ರಶ್ನೆಗೆ ನಾವು ಸಮಾಧಾನಕರ ಉತ್ತರ ಕಂಡುಕೊಳ್ಳುವ ಮೂಲಕ ನಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಈ ಬಗ್ಗೆ ಎಲ್ಲ ಲೇಖಕರು, ಪ್ರಕಾಶಕರು ಯೋಚಿಸುವ ಮೂಲಕ ಸಮಾಜದಲ್ಲಿನ ಅನೇಕ ನ್ಯೂನ್ಯತೆಗಳ್ನು ಹೋಗಲಾಡಿಸಬಹುದು ಎಂದು ತಿಳಿಸಿದರು.
ಅಸಮಾನತೆ ಹೋಗಲಾಡಿಸಿದರೆ ಸಮಾಜ ಅಭಿವೃದ್ಧಿಯಾಗುತ್ತದೆ : ಸಮಾಜದಲ್ಲಿ ಬದಲಾವಣೆಗಳಾಗಬೇಕು. ಜಾತಿ ಪದ್ಧತಿಯ ಕಾರಣ, ಬಹಳ ಜನ ಅಕ್ಷರ ಸಂಸ್ಕøತಿಯಿಂದ ವಂಚಿತರಾಗಿದ್ದಾರೆ. ಇದರಿಂದ ಆರ್ಥಿಕ, ಸಾಮಾಜಿಕ ಅಸಮಾನತೆ ಉಂಟಾಗುತ್ತದೆ. ಈ ಅಸಮಾನತೆಯನ್ನು ಹೋಗಲಾಡಿಸಿದರೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಿ ಅಭಿವೃದ್ಧಿ ಸಾಧ್ಯವಿದೆ. ನಮ್ಮ ಸಂವಿಧಾನದ ಉದ್ದೇಶವೂ ಇದೆ ಆಗಿದ್ದು, ಇದೇ ಯೋಚನೆಯ ಹಾದಿಯಲ್ಲಿಯೇ ನಮ್ಮ ಅನೇಕ ಬರಹಗಾರರು ಕೆಲಸ ಮಾಡುತ್ತಿದ್ದಾರೆ. ಬರಹಗಾರರು, ಪ್ರಕಾಶಕರು ತಮ್ಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರೆ ಪುಸ್ತಕೋದ್ಯಮ ಬೆಳೆಯಲು ಸಾಧ್ಯ ಎಂದರು.
ಜ್ಞಾನ ವೃದ್ಧಿಗಾಗಿ ಪುಸ್ತಕವನ್ನು ಓದಲೇಬೇಕು : ಭಾರತದಲ್ಲಿ ಒಂದು ವ್ಯಕ್ತಿ, ಒಂದು ಮತ, ಒಂದು ಮೌಲ್ಯವೆಂದು ಗುರುತಿಸುವಂತೆ ನಮ್ಮ ಸಂವಿಧಾನ ತಿಳಿಸಿದ್ದರೂ, ಸಾಮಾಜಿಕವಾಗಿ ಆರ್ಥಿಕವಾಗಿ ವೈರುಧ್ಯಗಳು ನಮ್ಮ ಸಮಾಜದಲ್ಲಿದೆ. ಅಸಮಾನತೆಗೆ ಒಳಗಾಗುವ ಜನರೇ ಭಾರತದ ಸ್ವಾತಂತ್ರ್ಯದ ಹಾಗೂ ಪ್ರಜಾಪ್ರಭುತ್ವದ ಸೌಧವನ್ನು ಧ್ವಂಸಗೊಳಿಸುವ ಸಾಧ್ಯತೆಯಿದೆ ಎಂದು ಡಾ. ಅಂಬೇಡ್ಕರ್ ಅವರು ಸಂವಿಧಾನ ಅಂಗೀಕೃತವಾದ ಸಂದರ್ಭದಲ್ಲಿ ಮಾಡಿದ ಐತಿಹಾಸಿಕ ಭಾಷಣದಲ್ಲಿ ತಿಳಿಸಿದ್ದರು. ಜ್ಞಾನ ವೃದ್ಧಿಗಾಗಿ ಪುಸ್ತಕವನ್ನು ಓದಲೇಬೇಕು. ಕಲಿತಷ್ಟು ಜ್ಞಾನ ವಿಕಾಸಗೊಳ್ಳುತ್ತದೆ. ಲೇಖಕರ ಬರಣವಣಿಗೆಗಳು ಸಮಾಜಮುಖಿಯಾಗಿರಬೇಕು ಎಂದು ತಿಳಿಸಿದರು.
ತಾನು ಸಾಹಿತಿಯಲ್ಲದಿದ್ದರೂ, ಸಾಹಿತಿಗಳ ಒಡನಾಟವಿರುವುದನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಸಾಹಿತ್ಯವನ್ನು ಬಹಳಷ್ಟು ಓದಿರುವುದಾಗಿ ತಿಳಿಸಿದರು. ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಮಹಾದೇವ ಇಂತಹ ಪ್ರಮುಖ ಸಾಹಿತಿಗಳೊಂದಿಗಿನ ತಮ್ಮ ಸ್ನೇಹವನ್ನು ನೆನೆದರು. ರಾಮದಾಸ ಎಂಬ ಕನ್ನಡ ಗುರುಗಳೊಂದಿಗಿನ ತಮ್ಮ ಸಂಬಂಧವನ್ನು ಸ್ಮರಿಸಿದರು. ಪಾಟೀಲ್ ಪುಟ್ಟಪ್ಪ, ಹಂಪಾ ನಾಗರಾಜ್,ಮಲ್ಲಿಕಾ ಗಂಟಿ ಯಂತಹ ಲೇಖಕರ ಒಡನಾಟದ ಬಗ್ಗೆ ವಿವರಿಸಿದರು.