Home ರಾಜಕೀಯ No one is as stupid as those who say they will win...

No one is as stupid as those who say they will win on the name of Modi: CM Siddaramaiah | ಮೋದಿ ಹೆಸರಿನ ಮೇಲೆಯೇ ಗೆಲ್ಲುತ್ತೇವೆ ಎನ್ನುವವರಷ್ಟು ಮೂರ್ಖರು ಯಾರೂ ಇಲ್ಲ: ಸಿಎಂ ಸಿದ್ದರಾಮಯ್ಯ

20
0

ಬೆಂಗಳೂರು: ಮೋದಿಯವರ ಹೆಸರಿನ ಮೇಲೆ ಗೆಲ್ಲುತ್ತೇವೆ ಎಂದು ಬಿಜೆಪಿ ಭಾವಿಸಿದೆ. ಮೋದಿಯವರು ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಪಾದಯಾತ್ರೆ ಮಾಡಿದರೂ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳು ಸಿಕ್ಕಿದೆ. ಮೋದಿಯವರು ಪ್ರಚಾರ ಮಾಡಿದ್ದ ಯಾವ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಲೇ ಇಲ್ಲ. ಹೀಗಾಗಿ ಮೋದಿಯವರ ಹೆಸರಿನ ಮೇಲೆಯೇ ಗೆಲ್ಲುತ್ತೇವೆನ್ನುವ ಇವರಷ್ಟು ಮೂರ್ಖರು ಯಾರೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ರವಿವಾರ ಕೆಂಗೇರಿಯ ಸೂಲಿಕೇರಿ ಮೈದಾನದಲ್ಲಿ ಪರಿಷತ್ ಉಪಚುನಾವಣೆಯಲ್ಲಿ ಪುಟ್ಟಣ್ಣ ಅವರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ಕೃತಜ್ಞತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಕೊಟ್ಟ ಮಾತಿನಂತೆ ನಡೆದುಕೊಳ್ಳವವರು, ಕೆಲಸ ಮಾಡಿರುವವರಿಗೆ ತಾನೇ ಕೂಲಿ ಕೊಡುವುದು. ಗೇಯುವ ಎತ್ತಿಗೆ ಹುಲ್ಲು ಹಾಕಬೇಕು. ಕಳ್ಳ ಎತ್ತಿಗೆ ಹುಲ್ಲು ಹಾಕಬಾರದು’ ಎಂದು ಹೇಳಿದರು.

‘ಮುಂದಿನ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಕ್ಷೇತ್ರಗಳಲ್ಲಿಯೂ ಗೆಲ್ಲುತ್ತೇವೆ ಎಂದು ಬಿಜೆಪಿ-ಜೆಡಿಎಸ್‍ನವರು ತಿಳಿದುಕೊಂಡಿದ್ದಾರೆ. 2023-24ರಲ್ಲಿ ಕರ್ನಾಟಕದಿಂದ 4.30 ಲಕ್ಷ ಕೋಟಿ ರೂ.ಈ ವರ್ಷ ತೆರಿಗೆ ಸಂಗ್ರಹಿಸಿ ನೀಡಲಾಗಿದೆ. ಆದರೆ ನಮಗೆ 50,257ಕೋಟಿ ರೂ.ಮಾತ್ರ ಕೇಂದ್ರದಿಂದ ವಾಪಾಸ್ ಬಂದಿದೆ. ಇದು ಅತ್ಯಂತ ಅನ್ಯಾಯ. ಹೀಗಾದರೆ ಕರ್ನಾಟಕದ ಅಭಿವೃದ್ಧಿ ಹೇಗಾಗಬೇಕು. ತೆರಿಗೆ ಹಂಚಿಕೆಯಲ್ಲಿ ನಮಗೆ ನ್ಯಾಯ ನೀಡಬೇಕೆಂದು ಜನರೇ ಪ್ರಶ್ನಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮೋದಿಯವರು ಪ್ರಧಾನಿಯಾದರೆ ದೇಶ ತೊರೆಯುತ್ತೇನೆ ಎಂದು ದೇವೇಗೌಡ ಹೇಳಿದ್ದು ಮರೆತುಹೋಯ್ತಾ?, ಮಾಜಿ ಪ್ರಧಾನಿ ದೇವೇಗೌಡರು ಈಗ ಬಿಜೆಪಿ ಜತೆ ಸೇರಿರುವುದು, ಮೋದಿಯವರನ್ನು ವಿಪರೀತ ಹೊಗಳುತ್ತಿರುವುದು ನನಗೆ ತುಂಬಾ ಆಶ್ಚರ್ಯ ಆಗಿದೆ. ಮುಂದಿನ ಜನ್ಮದಲ್ಲಿ ಮುಸ್ಲಿಮ್ ಆಗಿ ಹುಟ್ಟಲು ಬಯಸುತ್ತೇನೆ. ಬಿಜೆಪಿಗೆ ಯಾವತ್ತೂ ವಿರುದ್ಧವಾಗಿರುತ್ತೇವೆ ಎಂದಿದ್ದರು’ ಎಂದು ಸಿದ್ದರಾಮಯ್ಯ, ದೇವೇಗೌಡರ ಹೇಳಿಕೆ ಉಲ್ಲೇಖಿಸಿ ಟೀಕಿಸಿದರು.

‘ಇದೀಗ ತಮ್ಮ ಪಕ್ಷದ ಉಳಿವಿಗಾಗಿ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇಂದು ನಾಡಿನ ಜನತೆ ನಿಮ್ಮ ಹಾಗೆ ಪ್ರಜ್ಞಾವಂತರಾಗಿದ್ದಾರೆ. ಇವರ ಹೇಳಿಕೆಗಳನ್ನು ಪರಿಶೀಲಿಸಿ ತುಲನೆ ಮಾಡುವಷ್ಟು ತಿಳಿವಳಿಕೆ ನಾಡಿನ ಜನರಿಗೆ ಬಂದಿದೆ. ರಾಜಕೀಯವಾಗಿ ದೇವೇಗೌಡರು ತಮ್ಮ ಕುಟುಂಬದ ಉಳಿವಿಗಾಗಿ ಯಾವುದೇ ನಿರ್ಧಾರಕ್ಕೆ ಬಂದರೂ ಜನರು ಕಣ್ಣುಮುಚ್ಚಿಕೊಂಡು ಅವರನ್ನು ಬೆಂಬಲಿಸಬೇಕು ಎನ್ನುವ ಸಂದರ್ಭ ಈಗ ಇಲ್ಲ ಎಂದು ಸಿದ್ದರಾಮಯ್ಯ ಗುಡುಗಿದರು.

ಈ ಹಿಂದೆ ನಾನು ಜನತಾದಳ ‘ಎಸ್’ ನಲ್ಲಿದ್ದಾಗ, ಪುಟ್ಟಣ್ಣನವರಿಗೆ ಶಿಕ್ಷಕರು ಬೆಂಬಲಿಸುತ್ತಾರೆಂಬ ವಿಶ್ವಾಸವಿದ್ದು, ಚುನಾವಣೆಗೆ ನಿಲ್ಲುವುದಾಗಿ ತಿಳಿಸಿದ್ದರು. 2002ರಲ್ಲಿ ಜನರ ಆಶೀರ್ವಾದದಿಂದ ಜಯಗಳಿಸಿದರು. ನಂತರ ಐದು ಬಾರಿ ಗೆದ್ದಿದ್ದಾರೆ. ಜನರ ಧ್ವನಿಯಾಗಿ ಸಮರ್ಥವಾಗಿ ಕೆಲಸ ಮಾಡಿದ್ದು, ಬಿಜೆಪಿಯಿಂದ ಕಾಂಗ್ರೆಸ್‍ಗೆ ಬಂದರೂ ಅವರನ್ನು ಬೆಂಬಲಿಸಿದ ಶಿಕ್ಷಕ ಸಮುದಾಯದ ಪ್ರಜ್ಞಾವಂತಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೃಷಿ ಸಚಿವ ಚೆಲುವರಾಯಸ್ವಾಮಿ, ಶಾಸಕ ಬಾಲಕೃಷ್ಣ, ಪರಿಷತ್ ಸದಸ್ಯ ಪುಟ್ಟಣ್ಣ, ಶಿವಣ್ಣ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here