
ಮೈಸೂರು: ರಾಜ್ಯ ಸರ್ಕಾರ ನೀಡಿರುವ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಸಂಘ ಸಂಸ್ಥೆಗಳ ಚಟುವಟಿಕೆಗಳಿಗೆ ಮುಂಚಿತ ಅನುಮತಿ ಪಡೆಯುವ ಕುರಿತು ಹೊರಡಿಸಿದ ಆದೇಶದಲ್ಲಿ ಯಾವುದೇ ಸಂಘ ಸಂಸ್ಥೆಗಳನ್ನು ಗುರಿಯಾಗಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ರೀತಿಯಲ್ಲಿ ಯಾವುದೇ ಸಂಘ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆ ನಡೆಸಬಾರದು. ಅದಕ್ಕಾಗಿ ಮುಂಚಿತ ಅನುಮತಿ ಪಡೆಯುವಂತೆ ಸರ್ಕಾರ ಸೂಚಿಸಿದೆ. ಆದರೆ, ಇದರ ಮೂಲಕ ಯಾವುದೇ ನಿರ್ದಿಷ್ಟ ಸಂಘ ಸಂಸ್ಥೆಗಳನ್ನು ಟಾರ್ಗೆಟ್ ಮಾಡಿಲ್ಲ,” ಎಂದು ಹೇಳಿದರು.
ಕುಂದಾಪುರದಲ್ಲಿ ನಡೆದ ಆರ್ಎಸ್ಎಸ್ ಪಥಸಂಚಲನ ವಿವಾದ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಹೇಳಿದರು — “ಈ ರೀತಿಯ ಆದೇಶವನ್ನು ಹಿಂದಿನ ಬಿಜೆಪಿ ಸರ್ಕಾರ (ಜಗದೀಶ ಶೆಟ್ಟರ್ ನೇತೃತ್ವದಲ್ಲಿ) ಹೊರಡಿಸಿತ್ತು. ಆಗ ಯಾರೂ ವಿರೋಧ ವ್ಯಕ್ತಪಡಿಸಲಿಲ್ಲ. ಈಗ ನಮ್ಮ ಸರ್ಕಾರ ಇದೇ ಮಾದರಿಯ ಆದೇಶ ಹೊರಡಿಸಿದ್ದರಿಂದ ರಾಜಕೀಯ ಪ್ರಚಾರ ಮಾಡುವುದು ಸರಿಯಲ್ಲ,” ಎಂದು ಹೇಳಿದರು.
“ಜನರ ಹಿತಚಿಂತನೆ ಬಿಟ್ಟು, ಬಿಜೆಪಿ ರಾಜಕೀಯದಲ್ಲಿ ತೊಡಗಿಕೊಂಡಿದೆ. ಸಮಾಜದಲ್ಲಿ ಶಾಂತಿಭಂಗವಾಗದಂತೆ ಪೊಲೀಸ್ ಇಲಾಖೆ ನೋಡಿಕೊಳ್ಳುತ್ತದೆ,” ಎಂದು ಅವರು ಸ್ಪಷ್ಟಪಡಿಸಿದರು.
ಗುತ್ತಿಗೆದಾರರ ಬಾಕಿ ಪಾವತಿಗೆ ಕ್ರಮ
ಗುತ್ತಿಗೆದಾರರ ಬಾಕಿ ಪಾವತಿ ವಿಚಾರವಾಗಿ ರಾಜ್ಯಪಾಲರನ್ನು ಭೇಟಿಯಾಗುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಈ ಬಗ್ಗೆ ಸಂಬಂಧಪಟ್ಟ ಸಚಿವರು ಕ್ರಮ ಕೈಗೊಳ್ಳಲಿದ್ದಾರೆ,” ಎಂದು ತಿಳಿಸಿದರು.
ಮೈಸೂರು ಉದ್ಯೋಗ ಮೇಳ ಯಶಸ್ಸು — ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಣೆ
ಮೈಸೂರಿನಲ್ಲಿ ನಡೆದ ಉದ್ಯೋಗ ಮೇಳ ಯಶಸ್ವಿಯಾಗಿ ನಡೆದಿದ್ದು, ಇದೇ ಮಾದರಿಯ ಉದ್ಯೋಗ ಮೇಳಗಳನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದರು.