ಬೆಂಗಳೂರು:
ತಮ್ಮ ಹಾಗೂ ಬಿ ವೈ ವಿಜಯೇಂದ್ರ ನವದೆಹಲಿ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇರಲಿಲ್ಲ. ನಾಯಕತ್ವ ಬದಲಾವಣೆ ಎಂಬುದು ಹಸಿ ಸುಳ್ಳು. ಅದು ಸತ್ಯಕ್ಕೆ ಬಹಳ ದೂರವಾದ ಸಂಗತಿ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಸೋಮವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ಕೋವಿಡ್ ಬಿಟ್ಟು ಬೇರೆ ವಿಷಯ ಚರ್ಚೆ ಮಾಡುವ ಸಾಧ್ಯತೆಗಳೇ ಇಲ್ಲ. ಬೇರೆ ವಿಷಯ ಚರ್ಚೆ ಮಾಡುವುದು ಸಮಂಜಸವೂ ಅಲ್ಲ. ಅಂಥ ಉದ್ದೇಶವು ನಮ್ಮದಲ್ಲ. ನೀವು ಹೇಳಿದಂತೆ ರಾಜಕೀಯ ವಿಷಯ ಚರ್ಚೆ ಆಗಲಿಲ್ಲ. ಎಲ್ಲರೂ ಸೇರಿ ಕೋವಿಡ್ ವಿರುದ್ಧ ಹೋರಾಡಬೇಕಾಗಿದೆ. ಕೋವಿಡ್ ಬಗ್ಗೆ ಚರ್ಚೆ ನಡೆದಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಕೋವಿಡ್ ಸ್ಥಿತಿ ಬಗ್ಗೆ ಆತಂಕ
ಕೇಂದ್ರ ಸರ್ಕಾರಕ್ಕೆ ರಾಜ್ಯದಲ್ಲಿನ ಕೋವಿಡ್ ಸ್ಥಿತಿಗತಿ ಕುರಿತು ವಿವರಣೆ ನೀಡಲಾಯಿತು. ರಾಜ್ಯಕ್ಕೆ 965 ಮೆಟ್ರಿಕ್ ಟನ್ ಆಕ್ಸಿಜನ್ ಹಂಚಿಕೆಯಾಗಿದೆ. ನಮ್ಮ ಪಾಲಿನ ಆಕ್ಸಿಜನ್ ಪ್ರಮಾಣವನ್ನು ಹೆಚ್ಚು ಮಾಡಬೇಕು. ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಅನ್ನು ರಾಜ್ಯದಲ್ಲಿ ಬಳಕೆಗೆ ಅವಕಾಶ ಮಾಡಿಕೊಡಬೇಕು ಎಂದು ನಾವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದೆವು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಅವರು, ರಾಜ್ಯದ ಪಾಲಿನ ಆಕ್ಸಿಜನ್ ಪ್ರಮಾಣವನ್ನು ಹೆಚ್ಚಿಸಲಾಗುವುದು. 4 ಆಕ್ಸಿಜನ್ ಟ್ಯಾಂಕ್ ಗಳನ್ನು ರಾಜ್ಯಕ್ಕೆ ಹಂಚಿಕೆ ಮಾಡಿದ್ದಾರೆ. 10 ಟ್ಯಾಂಕ್ ಗಳನ್ನು ಹೆಚ್ಚುವರಿಯಾಗಿ ಕೊಡುತ್ತೇವೆ. ಬಹ್ರೆನ್ ನಿಂದ ಎರಡು ಟ್ಯಾಂಕ್ ಬರಲಿವೆ. ಕುವೈತ್ ನಿಂದ 40 ಟನ್ ಮಂಗಳೂರು ಕೋರ್ಟ್ಗೆ ಆಕ್ಸಿಜನ್ ಟ್ಯಾಂಕರ್ಗಳು ಬರಲಿವೆ ಇವುಗಳನ್ನು ಹೊತ್ತು ಬರುವ ಆಕ್ಸಿಜನ್ ಟ್ಯಾಂಕ್ ರ್ ಗಳನ್ನು ಬಳಕೆ ಮಾಡಿಕೊಳ್ಳುವಂತೆ ಅಮಿತ್ ಶಾ ಹೇಳಿರುವುದಾಗಿ ಬಸವರಾಜ್ ಬೊಮ್ಮಾಯಿ ವಿವರಿಸಿದರು.
ರಾಜ್ಯಕ್ಕೆ 2.67 ಲಕ್ಷ ರೆಮ್ ಡಿಸಿವಿರ್ ಔಷಧಿ ನೀಡುವುದಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾದ ಡಿ ವಿ ಸದಾನಂದ ಗೌಡ ಭರವಸೆ ನೀಡಿದ್ದಾರೆ ಎಂದು ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.