ಬೆಂಗಳೂರು, ಮಾರ್ಚ್ 11: ಕರ್ನಾಟಕದಲ್ಲಿ ಗೃಹ ಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಕೊರತೆ ಇಲ್ಲ, ಆದರೆ ಅಂತರರಾಷ್ಟ್ರೀಯ ಯುದ್ಧ ಪರಿಸ್ಥಿತಿಯಿಂದ ಕಮರ್ಷಿಯಲ್ ಗ್ಯಾಸ್ ಪೂರೈಕೆಯಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಯ ಉಂಟಾಗಬಹುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ವಸಂತನಗರದ ಆಹಾರ ಭವನದಲ್ಲಿ IOC, BPCL, HPCL ಮತ್ತು GAIL ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಅವರು ಈ ಕುರಿತು ಮಾಹಿತಿ ನೀಡಿದರು.
ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನಿಲ ಸಾಗಿಸುವ ವೆಸೆಲ್ಗಳ ಸಂಚಾರದಲ್ಲಿ ವಿಳಂಬ ಉಂಟಾಗಿದೆ. ಭಾರತಕ್ಕೆ ಅನಿಲ ಉತ್ಪನ್ನಗಳ ಬಹುಪಾಲು ಅಮೆರಿಕಾ, ಗಲ್ಪ್ ರಾಷ್ಟ್ರಗಳು ಹಾಗೂ ರಷ್ಯಾ ದೇಶಗಳಿಂದ ಆಮದು ಆಗುತ್ತದೆ. ಈ ಯುದ್ಧದ ಹಿನ್ನೆಲೆ ಕೆಲವೆಡೆ ಸಾಗಾಟದಲ್ಲಿ ತಡವಾಗುತ್ತಿರುವುದರಿಂದ ಸ್ವಲ್ಪ ಮಟ್ಟಿಗೆ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಸಚಿವರು ಹೇಳಿದರು.
ಕರ್ನಾಟಕದಲ್ಲಿ ಪ್ರತಿದಿನ ಸುಮಾರು 1000 ಮೆಟ್ರಿಕ್ ಟನ್ ಕಮರ್ಷಿಯಲ್ ಗ್ಯಾಸ್ ಅಗತ್ಯವಿದ್ದು, ಸುಮಾರು 50,000 (19 ಕೆಜಿ) ಸಿಲಿಂಡರ್ಗಳು ಬೇಕಾಗುತ್ತದೆ. ಗೃಹ ಬಳಕೆಗೆ ಸುಮಾರು 5,000 ಮೆಟ್ರಿಕ್ ಟನ್ ಗ್ಯಾಸ್ ಅಗತ್ಯವಿದ್ದು, ದಿನಕ್ಕೆ ಸುಮಾರು 3.5 ಲಕ್ಷ (14.2 ಕೆಜಿ) ಸಿಲಿಂಡರ್ಗಳ ಅವಶ್ಯಕತೆ ಇದೆ ಎಂದು ಅವರು ವಿವರಿಸಿದರು.
ಜನರು ಯಾವುದೇ ಆತಂಕಕ್ಕೆ ಒಳಗಾಗಬೇಕಾಗಿಲ್ಲ. ಕೇಂದ್ರ ಸರ್ಕಾರದ ನಿಯಮದಂತೆ ಒಂದು ಕುಟುಂಬಕ್ಕೆ 25 ದಿನಗಳಿಗೆ ಒಂದು ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಮನೆ ಬಳಕೆಯ ಗ್ಯಾಸ್ಗೆ ಮೊದಲ ಆದ್ಯತೆ ನೀಡಲಾಗುವುದು. ಕಮರ್ಷಿಯಲ್ ಗ್ಯಾಸ್ ಪೂರೈಕೆಯಲ್ಲಿ ಸ್ವಲ್ಪ ತೊಂದರೆ ಉಂಟಾದರೆ ಆಸ್ಪತ್ರೆಗಳು, ಶಾಲೆಗಳು ಮತ್ತು ಕಾಲೇಜುಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ನಂತರ ಹೋಟೆಲ್ಗಳು ಮತ್ತು ಕಲ್ಯಾಣ ಮಂಟಪಗಳಿಗೆ ಆದ್ಯತೆಯ ಮೇರೆಗೆ ಸಿಲಿಂಡರ್ಗಳನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಗ್ರಾಹಕರು ಅತಿಯಾಗಿ ಗ್ಯಾಸ್ ಬುಕ್ ಮಾಡದೇ, ಅಗತ್ಯವಿರುವಷ್ಟೇ ಬಳಕೆ ಮಾಡಬೇಕು ಎಂದು ಸಚಿವರು ಮನವಿ ಮಾಡಿದರು. ಈ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಲು ಸರ್ಕಾರದ ಕಾರ್ಯದರ್ಶಿಗಳ ಮಟ್ಟದಲ್ಲಿ ಪ್ರತಿ ವಾರ ಆಯಿಲ್ ಕಂಪನಿಗಳ ಜೊತೆ ಸಭೆ ನಡೆಸಲು ಸೂಚಿಸಲಾಗಿದೆ ಎಂದು ಹೇಳಿದರು.
ಅವರು 1960ರ ದಶಕದಲ್ಲಿ ಪ್ರಧಾನಿ ಲಾಲಬಹದ್ದೂರ್ ಶಾಸ್ತ್ರಿ ಅವರು ದೇಶದ ಸಂಕಷ್ಟದ ಸಂದರ್ಭದಲ್ಲಿ ಜನರು ಸ್ವಯಂಪ್ರೇರಿತವಾಗಿ ಮಿತ ವ್ಯಯ ಮಾಡಬೇಕು ಎಂದು ಕರೆ ನೀಡಿದ್ದನ್ನು ಸ್ಮರಿಸಿ, ಇಂತಹ ಸಂಕಷ್ಟದ ಸಂದರ್ಭದಲ್ಲಿ ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಸರ್ಕಾರದ ಕಾರ್ಯದರ್ಶಿ ಕನಗವಲ್ಲಿ, ಆಯುಕ್ತ ರವಿಕುಮಾರ್, ಸಚಿವರ ಆಪ್ತ ಕಾರ್ಯದರ್ಶಿ ಡಾ. ಎಚ್. ನಟರಾಜ್ ಹಾಗೂ ಆಯಿಲ್ ಕಂಪನಿಗಳ ಅಧಿಕಾರಿಗಳಾದ ನೀರಾ ಸಿಂಗ್, ಅರುಂಧಿ ಗೊಯಲ್, ದಿವ್ಯ, ಮುರಳಿ ಚಾರ್, ಸುಬ್ರತ್ ಚಟರ್ಜಿ, ರಾಜೇಶ್ ಸಿಂಗ್, ಸಂಜಯ್ ಕುಮಾರ್ ಸಿಂಗ್, ಪ್ರಣಯ ದೇವನಾಗನ್, ರವಿಕುಮಾರ್ ತಂಡಲ್, ಪ್ರಸೂನ್ ಮಾಲಿ ಮತ್ತು ನಿಗಮದ ಪ್ರಧಾನ ವ್ಯವಸ್ಥಾಪಕ ಮಂಜುನಾಥ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
