ಬೆಂಗಳೂರು: ಆಸ್ತಿ ತೆರಿಗೆ ಪಾವತಿ ಮಾಡದ ಕಾರಣ ಹರಾಜು ಕ್ರಮ ಕೈಗೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್, ಇದು ದೊಡ್ಡ ಸಮಸ್ಯೆಯಲ್ಲ ಎಂದು ಸ್ಪಷ್ಟಪಡಿಸಿದರು.
ಜಿಬಿಎ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸಣ್ಣ ಮನೆಮಾಲೀಕರು ಹೊರತುಪಡಿಸಿ ಬಹುತೇಕ ಬಾಕಿದಾರರು ವಾಣಿಜ್ಯ ಆಸ್ತಿ ಮಾಲೀಕರು. 80% ವಾಣಿಜ್ಯ ಆಸ್ತಿಗಳು ಕಳೆದ 7-8 ವರ್ಷಗಳಿಂದ ತೆರಿಗೆ ಪಾವತಿ ಮಾಡಿಲ್ಲ. ಕೆಲ ಮಾಜಿ ಶಾಸಕರ ಆಸ್ತಿಗಳೂ ಇವೆ. ಆದರೆ ಅವರ ಹೆಸರು ಹೇಳುವುದಿಲ್ಲ,” ಎಂದರು.
ತೆರಿಗೆ ಪಾವತಿ ಮಾಡದಿದ್ದರೆ ಪಾಲಿಕೆ ಕ್ರಮ ಕೈಗೊಳ್ಳಬೇಕೇ ಹೊರತು ಬೇರೆ ಮಾರ್ಗವಿಲ್ಲ ಎಂದು ಹೇಳಿದ ಅವರು, ಜನರಿಗೆ ಮಾನವೀಯತೆ ಆಧಾರದ ಮೇಲೆ ಒನ್ ಟೈಮ್ ಸೆಟ್ಲ್ಮೆಂಟ್ (ಓಟಿಎಸ್) ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ತಿಳಿಸಿದರು. “ನಾನು ತೆರಿಗೆ ಸಂಗ್ರಹದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಓಟಿಎಸ್ ಮೂಲಕ 2.65 ಲಕ್ಷ ಜನರು ಪ್ರಯೋಜನ ಪಡೆದಿದ್ದಾರೆ. ಇದರಿಂದ ಪಾಲಿಕೆಗೆ ₹1200 ಕೋಟಿ ಸಂಗ್ರಹವಾಗಿದೆ. ಇದು ಐತಿಹಾಸಿಕ ನಿರ್ಧಾರ,” ಎಂದರು.
ಕೆಲವು ಡೆವಲಪರ್ಗಳು ಕಟ್ಟಡ ನಕ್ಷೆ ಅನುಮೋದನೆಗಾಗಿ 35% ಪಾವತಿ ಮಾಡಿ, ಉಳಿದ 75% ಪಾವತಿ ಮಾಡದೇ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ಆರೋಪಿಸಿದ ಅವರು, “ಅಂತಹವರಿಗೆ ನಕ್ಷೆ ಅನುಮೋದನೆ ಮಾಡಬೇಡಿ ಎಂದು ಸೂಚಿಸಿದ್ದೇನೆ. ಇಂತಹ ದುರುಪಯೋಗವನ್ನು ಸಹಿಸಲು ಸಾಧ್ಯವಿಲ್ಲ,” ಎಂದು ಹೇಳಿದರು.
ಮಂತ್ರಿ ಮಾಲ್ ಮಾಲೀಕರು ₹35 ಕೋಟಿ ಬಾಕಿ ಉಳಿಸಿಕೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, “ಅಲ್ಲಿಗೆ ಬೀಗ ಹಾಕಿಸಿದ್ದೇವೆ. ₹8 ಕೋಟಿ ಹಣ ಪಾವತಿ ಮಾಡಿದ್ದಾರೆ. ನ್ಯಾಯಾಲಯ ಸ್ವಲ್ಪ ಕಾಲಾವಕಾಶ ನೀಡಿದೆ. ಇನ್ನೂ ₹20 ಕೋಟಿ ಬಾಕಿ ಇದೆ,” ಎಂದು ಸ್ಪಷ್ಟಪಡಿಸಿದರು.
ಸಾಮಾನ್ಯ 30×40 ನಿವೇಶನದಾರರು ಅಥವಾ ಬಡವರು ಇಲ್ಲ, ಹೆಚ್ಚಿನವರು ದೊಡ್ಡ ಆಸ್ತಿ ಮಾಲೀಕರೇ ಬಾಕಿದಾರರು ಎಂದು ಡಿ.ಕೆ. ಶಿವಕುಮಾರ್ ಪುನರುಚ್ಚರಿಸಿದರು.
