“ಮೋದಿ ಸರ್ಕಾರದಲ್ಲಿ ಸಂಪೂರ್ಣ ಪಾರದರ್ಶಕತೆ; ಟೆಂಡರ್ನಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಇಲ್ಲ”: ಜಿಎಂ–ಡಿಆರ್ಎಂ ಅಧಿಕಾರಗಳ ಬಗ್ಗೆ ಸೋಮಣ್ಣ ಸ್ಪಷ್ಟನೆ
ಮೈಸೂರು: ಮೋದಿ ಸರ್ಕಾರದ ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ಜವಾಬ್ದಾರಿತ್ವದಿಂದ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ, ಯಾವುದೇ ರಾಜಕೀಯ ಹಸ್ತಕ್ಷೇಪ ಇಲ್ಲ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸ್ಪಷ್ಟಪಡಿಸಿದರು.
ಬೆಂಗಳೂರು–ಮೈಸೂರು ರೈಲು ಮಾರ್ಗದಲ್ಲಿ ವಿಂಡೋ ಟ್ರೇಲಿಂಗ್ ಪರಿ ಪರಿವೀಕ್ಷಣೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ರೈಲ್ವೆ ಟೆಂಡರ್ ವ್ಯವಸ್ಥೆಯಲ್ಲಿ ಸಚಿವರು ಅಥವಾ ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪ ಇಲ್ಲ ಎಂದು ಹೇಳಿದರು. “ಇಲ್ಲಿ ಪರ್ಸೆಂಟೇಜ್ ಅಥವಾ ಫೇವರಿಟಿಸಂ ಎನ್ನುವ ಪದಗಳಿಗೆ ಸ್ಥಳವಿಲ್ಲ. ಅಧಿಕಾರಿಗಳೇ ಟೆಂಡರ್ ಹಾಕಿ, ನೀಡುವ ಹಾಗೂ ಕೆಲಸಗಳನ್ನು ನಿರ್ವಹಿಸುವ ವ್ಯವಸ್ಥೆ ಇದೆ,” ಎಂದು ಹೇಳಿದರು.
ರೈಲ್ವೆ ವ್ಯವಸ್ಥೆಯಲ್ಲಿನ ವಿಕೇಂದ್ರೀಕೃತ ಆಡಳಿತ ಕ್ರಮವನ್ನು ವಿವರಿಸಿದ ಸೋಮಣ್ಣ, ಡಿವಿಷನಲ್ ರೈಲ್ವೆ ಮ್ಯಾನೇಜರ್ (ಡಿಆರ್ಎಂ) ಹಾಗೂ ಜನರಲ್ ಮ್ಯಾನೇಜರ್ (ಜಿಎಂ)ಗಳಿಗೆ ಮಹತ್ವದ ಆರ್ಥಿಕ ಅಧಿಕಾರಗಳನ್ನು ನೀಡಲಾಗಿದೆ ಎಂದು ತಿಳಿಸಿದರು. ಇದರಿಂದ ನಿರ್ಧಾರಗಳನ್ನು ವೇಗವಾಗಿ ತೆಗೆದುಕೊಳ್ಳಲು ಹಾಗೂ ಜವಾಬ್ದಾರಿತ್ವ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದರು.
ಜನರಲ್ ಮ್ಯಾನೇಜರ್ಗಳಿಗೆ ₹100 ಕೋಟಿ ವರೆಗೆ ಆಡಳಿತಾಧಿಕಾರವಿದ್ದು, ₹500 ಕೋಟಿ ವರೆಗೆ ರೈಲ್ವೆ ಮಂಡಳಿಯ ಚೇರ್ಮನ್ ಮಟ್ಟದಲ್ಲಿ ಅನುಮೋದನೆ ದೊರೆಯುತ್ತದೆ. ಅದಕ್ಕಿಂತ ಮೇಲಿನ ಯೋಜನೆಗಳು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ಸಚಿವ ಸಂಪುಟದ ಮಟ್ಟದಲ್ಲಿ ನಿರ್ಧಾರವಾಗುತ್ತವೆ ಎಂದು ಹೇಳಿದರು.
ಈ ವ್ಯವಸ್ಥೆಯಿಂದ ಟೆಂಡರ್ ಪ್ರಕ್ರಿಯೆ ಸಂಪೂರ್ಣವಾಗಿ ಅಧಿಕಾರಿಗಳ ಮೂಲಕವೇ ನಡೆಯುತ್ತಿದ್ದು, ಯಾವುದೇ ರೀತಿಯ ಅಕ್ರಮ ಅಥವಾ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ. “ಪ್ರತಿ ಒಂದು ಪೈಸೆಯೂ ಲೆಕ್ಕಕ್ಕೆ ಬರುತ್ತದೆ. ಪಾರದರ್ಶಕತೆ ಪ್ರತಿಯೊಂದು ಹಂತದಲ್ಲೂ ಕಾಯ್ದುಕೊಳ್ಳಲಾಗಿದೆ,” ಎಂದು ಅವರು ಹೇಳಿದರು.
ಇದೇ ವೇಳೆ, ಕರ್ನಾಟಕದ ಕೆಲವು ಪ್ರಮುಖ ರೈಲ್ವೆ ಯೋಜನೆಗಳು ಭೂಸ್ವಾಧೀನ ಹಾಗೂ ರಾಜ್ಯ ಸರ್ಕಾರದ ಸಹಕಾರದ ಕೊರತೆಯಿಂದ ವಿಳಂಬವಾಗುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದಿಂದ ಹಣಕಾಸು ಸಹಾಯ ಸಿದ್ಧವಾಗಿದ್ದರೂ, ರಾಜ್ಯ ಮಟ್ಟದ ಅಡೆತಡೆಗಳಿಂದ ಯೋಜನೆಗಳು ನಿಧಾನಗತಿಯಲ್ಲಿ ಸಾಗುತ್ತಿವೆ ಎಂದು ಹೇಳಿದರು.
ಬೆಂಗಳೂರು–ಚಾಮರಾಜನಗರ ಹಾಗೂ ಮೈಸೂರು–ಕುಶಾಲನಗರ ಸಂಪರ್ಕ ಯೋಜನೆಗಳಂತಹ ಬಾಕಿ ಯೋಜನೆಗಳಿಗೆ ರಾಜ್ಯ ಸರ್ಕಾರ ತ್ವರಿತವಾಗಿ ಸಹಕಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.
“ಇಂದಿನ ರೈಲ್ವೆ ವ್ಯವಸ್ಥೆ ಪಾರದರ್ಶಕತೆ, ಕಾರ್ಯಕ್ಷಮತೆ ಮತ್ತು ಜವಾಬ್ದಾರಿತ್ವದ ಮೇಲೆ ನಡೆಯುತ್ತಿದೆ. ಇದರ ಲಾಭ ನೇರವಾಗಿ ಸಾರ್ವಜನಿಕರಿಗೆ ತಲುಪುತ್ತಿದೆ,” ಎಂದು ಸೋಮಣ್ಣ ಹೇಳಿದರು.
