ಬೆಂಗಳೂರು:
ಕಲ್ಲುಗಣಿ, ಎಂ-ಸ್ಯಾಂಡ್ ಸೇರಿ ಉಪ ಖನಿಜಗಳ ಗಣಿ ಗುತ್ತಿಗೆಗಳ ಅವಧಿಯನ್ನು ಗರಿಷ್ಠ 30 ವರ್ಷ ಮತ್ತು 50 ವರ್ಷ ವಿಸ್ತರಿಸಲು ಅವಕಾಶ ಮಾಡಿಕೊಟ್ಟಿರುವ ‘ಕರ್ನಾಟಕ ಉಪ ಖನಿಜ ರಿಯಾಯಿತಿ(ತಿದ್ದುಪಡಿ) ನಿಯಮ-2023’ ಅನ್ನು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಸಮಗ್ರ ವರದಿ ನೀಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ಸಂಬಂಧ ಮಾಹಿತಿ ಹಕ್ಕು ಕಾರ್ಯಕರ್ತ ಕೆ.ಪಿ.ಶಿವಕುಮಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಹೈಕೋರ್ಟ್ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಈ ವೇಳೆ ಅರ್ಜಿದಾರರ ಪರ ವಕೀಲೆ ವಿಜೇತಾ ಆರ್.ನಾಯಕ್ ವಾದ ಮಂಡಿಸಿದರು. ಸರಕಾರದ ಪರ ವಕೀಲ ಎಸ್.ಎಸ್.ಮಹೇಂದ್ರ ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡರು.
ವಕೀಲರ ವಾದ ಆಲಿಸಿದ ನ್ಯಾಯಪೀಠ, ಇದೊಂದು ಗಂಭೀರ ವಿಚಾರವಾಗಿದೆ. ಅರ್ಜಿಯಲ್ಲಿ ಆಕ್ಷೇಪಿಸಲಾದ ವಿಷಯಗಳ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತು. ಇದೇ ವೇಳೆ ಅರ್ಜಿಯಲ್ಲಿ ತಮ್ಮನ್ನು ಪ್ರತಿವಾದಿಯಾಗಿ ಸೇರಿಸಬೇಕೆಂದು ಫೆಡರೇಷನ್ ಆಫ್ ಕರ್ನಾಟಕ ಗ್ರಾನೈಟ್ ಇಂಡಸ್ಟ್ರಿ ಸಲ್ಲಿಸಿದ ಮಧ್ಯಂತರ ಅರ್ಜಿ ಅಂಗೀಕರಿಸಿ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ ವಿಚಾರಣೆಯನ್ನು ಜ.19ಕ್ಕೆ ಮುಂದೂಡಿತು.