ಬೆಂಗಳೂರು:
ಒಡಿಶಾದ ಬಾಲಸೋರ್ ನಲ್ಲಿ ಸಂಭವಿಸಿದ ರೈಲು ದುರಂತದ ಹಿನ್ನೆಲೆಯಲ್ಲಿ ಕನ್ನಡಿಗರ ರಕ್ಷಣೆಗಾಗಿ ಸಚಿವ ಸಂತೋಷ್ ಲಾಡ್ ಅವರನ್ನು ಘಟನಾ ಸ್ಥಳಕ್ಕೆ ನಿಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ರೈಲು ದುರಂತದಲ್ಲಿ ಸುಮಾರು 300 ಜನರು ಮರಣ ಅಸುನೀಗಿರುವುದು ದುರದೃಷ್ಟಕರ. ಅಪಘಾತದ ಸುದ್ದಿಯಿಂದ ಅತೀವ ನೋವಾಗಿದ್ದು, ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ರೈಲ್ವೆ ಇಲಾಖೆಯವರು ಅಪಘಾತದ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ. ಅಪಘಾತದಲ್ಲಿ ಕನ್ನಡಿಗರ ಸಾವು ನೋವು ಬಗ್ಗೆ ಯಾವುದೇ ಮಾಹಿತಿ ಬಂದಿರುವುದಿಲ್ಲ. ಘಟನೆಯ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಪ್ರಾಥಮಿಕ ಮಾಹಿತಿ ಪಡೆಕುಕೊಂಡು, ಕನ್ನಡಿಗರ ರಕ್ಷಣೆ ಹಾಗೂ ಅಗತ್ಯ ನೆರವು ಒದಗಿಸಲು ಘಟನಾ ಸ್ಥಳಕ್ಕೆ ಸಚಿವ ಸಂತೋಷ್ ಲಾಡ್ ಅವರು ತೆರಳಿದ್ದಾರೆ ಎಂದು ತಿಳಿಸಿದರು.
ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ತಂಡದ ಜೊತೆ ಸಂತೋಶ್ ಅವರು ಚಾರ್ಟರ್ಡ್ ಫ್ಲೈಟ್ನಲ್ಲಿ ಒಡಿಶಾಗೆ ತೆರಳುತ್ತಿದ್ದಾರೆಂದು ವರದಿಗಳು ತಿಳಿಸಿವೆ.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಂತೋಷ್ ಲಾಡ್ ಅವರು, ಕನ್ನಡಿಗರನ್ನ ಸುರಕ್ಷಿತವಾಗಿ ಕರೆತರುವುದು ನಮ್ಮ ಜವಾಬ್ದಾರಿ. ವಿಶೇಷ ಏರ್ ಕ್ರಾಫ್ಟ್ ಮೂಲಕ ಮಧ್ಯಾಹ್ನ 2.30 ಕ್ಕೆ ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಗಳ ಜೊತೆ ಭುವನೇಶ್ವರಕ್ಕೆ ಹೋಗುತ್ತಿದ್ದೇನೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಸ್ಥಳಕ್ಕೆ ತೆರಳಬೇಕಾಗಿದೆ. ಸಂಜೆ 6-7 ಗಂಟೆಗೆ ನಾನು ದುರಂತ ಸ್ಥಳಕ್ಕೆ ತಲುಪಬಹುದು. ಅಲ್ಲಿ ಹೋದ ಮೇಲೆ ವ್ಯವಸ್ಥೆಗೆ ಏನು ಲಭ್ಯ ಇದೆ ಎಂಬುದನ್ನು ನೋಡಬೇಕಾಗುತ್ತದೆ. ಕನ್ನಡಿಗರಿಗೆ ಯಾವುದೇ ತೊಂದರೆ ಇದ್ದರೆ ಚಿಕಿತ್ಸೆ, ಸುರಕ್ಷಿತವಾಗಿ ಕರೆತರುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ಕನ್ನಡಿಗರಿಗೆ ಈಗ ಯಾರಿಗೂ ಯಾವುದೇ ಸಮಸ್ಯೆ ಆಗಿಲ್ಲ. ಯಾವ ರೀತಿ ಕರೆತರುವುದು ಎಂಬ ಬಗ್ಗೆ ಅಲ್ಲಿನ ಪರಿಸ್ಥಿತಿ ನೋಡಿ ನಿರ್ಧಾರ ಮಾಡುತ್ತೇನೆ. ದುರಂತ ಸ್ಥಳದಲ್ಲಿರುವ ಕನ್ನಡಿಗರು ನನ್ನ ಮೊಬೈಲ್ ಸಂಖ್ಯೆಗೆ 9845739999 ಸಂಪರ್ಕಿಸಬಹುದು. ನಾನು ವೈಯಕ್ತಿಕವಾಗಿ ಅಲ್ಲಿ ಅವರನ್ನು ಅಟೆಂಡ್ ಮಾಡುತ್ತೇನೆ ಎಂದು ತಿಳಿಸಿದ್ದಾರೆ.