Home ಬೆಂಗಳೂರು ನಗರ Karnataka illegal mining property confiscation law: ಅಕ್ರಮ ಗಣಿ ಆಸ್ತಿ ಜಪ್ತಿ ಕಾನೂನಿಗೆ ಅಧಿಕೃತ...

Karnataka illegal mining property confiscation law: ಅಕ್ರಮ ಗಣಿ ಆಸ್ತಿ ಜಪ್ತಿ ಕಾನೂನಿಗೆ ಅಧಿಕೃತ ಮುದ್ರೆ : ಎಚ್.ಕೆ ಪಾಟೀಲ

19
0
HK Patil

ಬೆಂಗಳೂರು: ಕರ್ನಾಟಕ ಅಕ್ರಮ ಗಣಿಗಾರಿಕೆ ಮತ್ತು ಅಪರಾಧದ ಉತ್ಪತ್ತಿಗಳಿಂದಾದ ಸ್ವತ್ತನ್ನು ವಶಪಡಿಸಿಕೊಳ್ಳುವುದಕ್ಕಾಗಿ ಮತ್ತು ಜಪ್ತಿಗಾಗಿ ವಸೂಲಾತಿ ಆಯುಕ್ತರ ನೇಮಕಾತಿ ಅಧಿನಿಯಮ, 2025 ಕ್ಕೆ ಮಾನ್ಯ ಘನತೆವೆತ್ತ ರಾಜ್ಯಪಾಲರು ಒಪ್ಪಿಗೆ ನೀಡಿದ್ದು, ಈ ಅಧಿನಿಯಮ ದಿನಾಂಕ:09.09.2025 ರಿಂದ ಅಧಿಕೃತವಾಗಿ ಜಾರಿಗೆ ಬಂದಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ರವರು ಇಂದು ಗದಗನಲ್ಲಿ ಮಾಧ್ಯಮಗೊಷ್ಠಿಯಲ್ಲಿ ತಿಳಿಸಿದರು.

ಕರ್ನಾಟಕ ರಾಜ್ಯದಲ್ಲಿ ಲೆಕ್ಕವಿಲ್ಲದಷ್ಟು ಸಂಖ್ಯೆಯ ಗುತ್ತಿಗೆದಾರರು, ಸಾಗಾಣಿಕೆದಾರರು, ರಫ್ತುದಾರರು, ದಾಸ್ತಾನುಧಾರಕರು, ಖರೀದಿದಾರರು ಮತ್ತು ಇತರ ಮಧ್ಯವರ್ತಿಗಳು ಸೇರಿದಂತೆ ಬಹುವಹಿವಾಟುಗಳನ್ನು ಒಳಗೊಂಡ ಅಕ್ರಮ ಗಣಿಗಾರಿಕೆ ಚಟುವಟಿಕೆಗಳಿಂದ ಸಂಘಟಿತ ಅಪರಾಧ, ವ್ಯವಸ್ಥಿತ ಒಳಸಂಚು ಮತ್ತು ಅಪರಾಧ ಉತ್ಪತ್ತಿಗಳಿಂದಾದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲು, ಜಪ್ತಿಮಾಡಲು, ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ವಸೂಲಿ ಆಯುಕ್ತರೊಬ್ಬರ ನೇಮಕಾತಿಯ ಅವಶ್ಯಕತೆಯನ್ನು ಸರ್ಕಾರ ಮನಗಂಡು ಈ ಅಧಿನಿಯಮವನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಿ, ಒಪ್ಪಿಗೆ ಪಡೆದು ಇಂದು ಅಧಿಸೂಚಿಸಿದೆ.

ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಮುಟ್ಟುಗೋಲು ಹಾಕಿಕೊಳ್ಳಬಹುದಾದ ಆಸ್ತಿಯನ್ನು ಗುರುತಿಸಿ, ಅಂತಹ ಆಸ್ತಿಯನ್ನು ಜಪ್ತಿಮಾಡಲು ಸರ್ಕಾರಕ್ಕೆ ಅಧಿಕಾರ ದೊರಕಿದೆ. ಅಕ್ರಮ ಗಣಿಗಾರಿಕೆ ಕುರಿತು ನಂದಿ ಗಿರಿಧಾಮದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆಯಾಗಿ ನನ್ನ ಅಧ್ಯಕ್ಷತೆಯಲ್ಲಿ ದಿನಾಂಕ:05.07.2025 ರಂದು ಸಚಿವ ಸಂಪುಟದ ಉಪಸಮಿತಿ ರಚನೆಯಾಗಿತ್ತು. ಈ ಸಮಿತಿಯು ದಿನಾಂಕ:13.08.2025 ರಂದು ಮಾನ್ಯ ಸಚಿವ ಸಂಪುಟಕ್ಕೆ ತನ್ನ ವರದಿಯನ್ನು ಸಲ್ಲಿಸಿತ್ತು. ಈ ವರದಿಯ ಜೊತೆಗೆ ಕರಡು ಮಸೂದೆಯನ್ನು ಸಹ ಸಚಿವ ಸಂಪುಟಕ್ಕೆ ಮಂಡಿಸಿತ್ತು. ಈ ಮಸೂದೆಯೊಂದಿಗೆ ಸಚಿವ ಸಂಪುಟದ ಉಪಸಮಿತಿಯ ವರದಿಯನ್ನು ಸಚಿವ ಸಂಪುಟವು ಸರ್ವಾನುಮತದಿಂದ ಅಂಗೀಕರಿಸಿ, ಅಕ್ರಮ ಗಣಿಗಾರಿಕೆ ವಿರುದ್ಧ ಅತ್ಯಂತ ಕಠಿಣಾತಿ-ಕಠಿಣ ಕ್ರಮಗಳನ್ನು ಕೈಗೊಳ್ಳಲು ಅನುಮೋದನೆ ನೀಡಿತ್ತು.

ರಾಜ್ಯ ಸಚಿವ ಸಂಪುಟದ ನಿರ್ಣಯದಂತೆ ದಿನಾಂಕ:18.08.2025 ರಂದು ವಿಧಾನಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಲಾಯಿತು. ದಿನಾಂಕ:21.08.2025 ರಂದು ವಿಧಾನಸಭೆಯಲ್ಲಿ ಮತ್ತು ದಿನಾಂಕ:22.08.2025 ರಂದು ವಿಧಾನ ಪರಿಷತ್ತಿನಲ್ಲಿ ಮಸೂದೆಯನ್ನು ಮಂಡಿಸಿ, ಅಂಗೀಕರಿಸಲಾಯಿತು.

ಈ ವಸೂಲಾತಿ ಆಯುಕ್ತರ ನೇಮಕದಿಂದಾಗಿ ರಾಜ್ಯದಲ್ಲಿ ಆರ್ಥಿಕ ಶಿಸ್ತು ತರಲು ಸೂಕ್ತವಾದಂತಹ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಇಂದು ಗದಗನಲ್ಲಿ ಪ್ರಕಟಿಸಿದ್ದಾರೆ.

Also Read: Karnataka Governor Approves Law to Seize Illegal Mining Assets; Minister H.K. Patil Calls It a Historic Step for Economic Discipline

ಘನತೆವೆತ್ತ ರಾಜ್ಯಪಾಲರು ದಿನಾಂಕ:09.09.2025 ರಂದು ಈ ಐತಿಹಾಸಿಕ ಮಸೂದೆಗೆ ಅಂಕಿತ ಹಾಕುವ ಮೂಲಕ ಸರ್ಕಾರದ ಬದ್ದತೆಗೆ ಮುದ್ರೆ ಒತ್ತಿದ್ದಾರೆ ಎಂದು ಹೇಳಿದರು. ಕನ್ನಡಿಗರ ಆಸ್ತಿ ಕನ್ನಡಿಗರಿಗೆ ಮರಳಿಸುವ ಉದ್ದೇಶ ಈಡೇರಿದೆ. ನಮ್ಮ ಪಕ್ಷ ಮತ್ತು ಸರ್ಕಾರ ಈ ಮೊದಲು ಕನ್ನಡ ನಾಡಿನ ಜನತೆಗೆ ನೀಡಿದ ವಾಗ್ದಾನವನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಿದೆ ಎಂದು ಸಚಿವರು ತಿಳಿಸಿದರು.

ರಾಜ್ಯದಲ್ಲಿ ಗಣಿ ಹಗರಣದ ಕಾರಣ ಕಳೆದ 1/1/2 ತಿಂಗಳಿನಿಂದ ಮಾನ್ಯ ಮುಖ್ಯಮಂತ್ರಿಯವರ ವಿಶೇಷ ಮಾರ್ಗದರ್ಶನದಲ್ಲಿ ಹಲವಾರು ಕ್ರಮಗಳನ್ನು ಸರ್ಕಾರ ಕೈಗೊಳ್ಳಲು ಪ್ರಾರಂಭಿಸಿತ್ತು ಎಂದು ನೆನಪಿಸಿಕೊಂಡರು.

LEAVE A REPLY

Please enter your comment!
Please enter your name here