ಬೆಂಗಳೂರು: ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಕರ್ನಾಟಕ ವಿಧಾನಪರಿಷತ್ ಸದಸ್ಯರುಗಳು ಅನಿವಾರ್ಯವಾಗಿ ಕೆಲ ಸಂದರ್ಭಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಬೇಕಾಗುತ್ತದೆ. ಆದರೆ, ಕೆಲವು ಅಧಿಕಾರಿಗಳು ಜನಪ್ರತಿನಿಧಿಗಳ ಕರೆಗಳನ್ನು ಸ್ವೀಕರಿಸದೇ ಇರುವುದಲ್ಲದೆ, ತುರ್ತು ಕಾರ್ಯನಿರತವಾಗಿದ್ದರೂ ಕನಿಷ್ಠ ಸೌಜನ್ಯಕ್ಕಾಗಿ ಮರುಕರೆ ಮಾಡುವ ಪದ್ಧತಿಯನ್ನು ಪಾಲಿಸುತ್ತಿಲ್ಲ ಎಂಬ ಗಂಭೀರ ದೂರುಗಳು ಶಾಸಕರಿಂದ ಮೌಖಿಕವಾಗಿ ಸಲ್ಲಿಕೆಯಾಗಿವೆ.
ರಾಜ್ಯದ ವಿವಿಧ ಭಾಗಗಳಿಂದ ಸಾರ್ವಜನಿಕರು ತಮ್ಮ ಸಮಸ್ಯೆಗಳು ಹಾಗೂ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳುವ ಸಲುವಾಗಿ ಜನಪ್ರತಿನಿಧಿಗಳನ್ನು ಸಂಪರ್ಕಿಸುವ ಸಂದರ್ಭಗಳಲ್ಲಿ, ಆ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂವಹನ ನಡೆಸುವುದು ಅನಿವಾರ್ಯವಾಗುತ್ತದೆ. ಆದರೆ ಅಧಿಕಾರಿಗಳು ಕರೆ ಸ್ವೀಕರಿಸದೇ ಇರುವ ಅಥವಾ ನಂತರ ಮರುಸಂಪರ್ಕ ಮಾಡದೇ ಇರುವ ನಡೆ, ಜನಪ್ರತಿನಿಧಿಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗುತ್ತಿದೆ.
ಈ ರೀತಿಯ ವರ್ತನೆ ಆಡಳಿತ ಯಂತ್ರದ ಮೇಲಿನ ಸಾರ್ವಜನಿಕ ನಂಬಿಕೆಗೆ ಧಕ್ಕೆ ತರುವುದರ ಜೊತೆಗೆ, ಸಂವಿಧಾನಾತ್ಮಕವಾಗಿ ಮಾನ್ಯ ಶಾಸಕರಿಗೆ ನೀಡಲಾಗಿರುವ ಹಕ್ಕುಗಳ ಉಲ್ಲಂಘನೆಯ ವ್ಯಾಪ್ತಿಗೆ ಒಳಪಡುವ ಸಾಧ್ಯತೆಯಿದೆ. ಪರಿಣಾಮವಾಗಿ, ಈ ವಿಷಯವನ್ನು ಹಕ್ಕುಬಾಧ್ಯತಾ ಸಮಿತಿಗೆ ಒಪ್ಪಿಸಬೇಕಾದ ಅನಿವಾರ್ಯತೆ ಉಂಟಾಗುವ ಸಾಧ್ಯತೆಯೂ ಇದೆ ಎಂದು ಶಾಸಕರು ಎಚ್ಚರಿಸಿದ್ದಾರೆ.
ಸಾರ್ವಜನಿಕ ಸೇವೆಯೇ ಸರ್ಕಾರದ ಪ್ರಮುಖ ಕರ್ತವ್ಯವಾಗಿರುವ ಹಿನ್ನಲೆಯಲ್ಲಿ, ಕೆಲವು ಅಧಿಕಾರಿಗಳ ಈ ನಿರ್ಲಕ್ಷ್ಯಪೂರ್ಣ ನಡೆ ಅತ್ಯಂತ ಪ್ರಶ್ನಾರ್ಹವಾಗಿದೆ. ಜನಪ್ರತಿನಿಧಿಗಳಿಗೆ ಈ ಸ್ಥಿತಿ ಉಂಟಾದರೆ, ಸಾಮಾನ್ಯ ನಾಗರಿಕರ ಸ್ಥಿತಿ ಏನಾಗಬಹುದು ಎಂಬ ಗಂಭೀರ ಪ್ರಶ್ನೆಯನ್ನೂ ಈ ನಡೆ ಎಬ್ಬಿಸುತ್ತದೆ.
ಆದುದರಿಂದ, ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ರಾಜ್ಯದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಗೆ ಸಮಯೋಚಿತವಾಗಿ ಮತ್ತು ಸಮರ್ಪಕವಾಗಿ ಸ್ಪಂದಿಸುವಂತೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಮಾಡಲಾಗಿದೆ.
ಈ ಸಂಬಂಧ ವಿಧಾನಪರಿಷತ್ ಸದಸ್ಯ ಬಸವರಾಜ ಎಸ್. ಹೊರಟ್ಟಿ ಅವರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಅಧಿಕೃತವಾಗಿ ಪತ್ರ ಬರೆದಿದ್ದಾರೆ.
