one crore compensation to families of KSRTC drivers who died in accident
ಬೆಂಗಳೂರು:
ಅಪಘಾತದಲ್ಲಿ ಮೃತಪಟ್ಟ ಇಬ್ಬರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಚಾಲಕ-ಕಮ್ ಕಂಡಕ್ಟರ್‌ಗಳ ಕುಟುಂಬಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶನಿವಾರ ತಲಾ 1 ಕೋಟಿ ರೂ.ಗಳ ಅಪಘಾತ ಪರಿಹಾರದ ಚೆಕ್ ವಿತರಿಸಿದರು.
ಕೆಎಸ್ಆರ್‌ಟಿಸಿಯ ಬೆಂಗಳೂರು ವಿಭಾಗದಲ್ಲಿ 11 ವರ್ಷ ಸೇವೆ ಸಲ್ಲಿಸಿದ್ದ ಜಿವಿ ಚಲಪತಿ (41) ಜನವರಿ ತಿಂಗಳಿನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟರೆ, ಹಾಸನ ವಿಭಾಗದಲ್ಲಿ 17 ವರ್ಷಗಳಿಂದ ಸೇವೆ ಸಲ್ಲಿಸಿದ್ದ ಪಿಎನ್ ನಾಗರಾಜು ಅವರು ಫೆಬ್ರುವರಿಯಲ್ಲಿ ತಮ್ಮ ದ್ವಿಚಕ್ರ ವಾಹನ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದರು.
ಕೆಎಸ್‌ಆರ್‌ಟಿಸಿ ದೇಶದಲ್ಲಿಯೇ ಪ್ರಥಮವಾಗಿ ಕಾರ್ಮಿಕ ಕಲ್ಯಾಣದ ಯೋಜನೆ ಅಡಿಯಲ್ಲಿ ಸಿಬ್ಬಂದಿಗೆ 1 ಕೋಟಿ ರೂ. ಮೊತ್ತದ ಅಪಘಾತ ವಿಮೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಲ್ಲಿ, ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ವತಿಯಿಂದ ಪ್ರೀಮಿಯಂ ರಹಿತ 50 ಲಕ್ಷ ರೂ. ವಿಮೆ ಹಾಗೂ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಡೆಯಿಂದ ವಾರ್ಷಿಕ 885 ರೂ. ಪ್ರೀಮಿಯಂ (ನೌಕರರಿಂದ) ಪಾವತಿಯೊಂದಿಗೆ 50 ಲಕ್ಷ ರೂ. ವಿಮೆಯನ್ನು ಒಳಗೊಂಡಿದೆ.
ಈ ವೇಳೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ಮೃತಪಟ್ಟವರನ್ನು ಮರಳಿ ಕರೆತರಲು ಸಾಧ್ಯವಿಲ್ಲ. ಆದರೆ, ಅವರ ಕುಟುಂಬಗಳಿಗೆ ನೆರವಾಗಲು ನಿಗಮ ಜಾರಿಗೊಳಿಸಿರುವ ಈ ಅಪಘಾತ ಪರಿಹಾರ ವಿಮೆಯು ಉತ್ತಮವಾಗಿದ್ದು, ಇದು ಭಾರತದ ಯಾವುದೇ ಸರ್ಕಾರಿ ಬಸ್ ನಿಗಮಗಳಲ್ಲಿನ ಅತ್ಯಧಿಕ ವಿಮೆಯಾಗಿದೆ. ವಿಮಾ ಯೋಜನೆಯು ನೌಕರರು ಕರ್ತವ್ಯದಲ್ಲಿರುವಾಗ ಅಥವಾ ಕರ್ತವ್ಯದಲ್ಲಿರದ ಸಂದರ್ಭಗಳಲ್ಲಿ ಸಂಭವಿಸುವ ಅಪಘಾತಗಳಿಗೆ ಅನ್ವಯಿಸುತ್ತದೆ ಎಂದು ಹೇಳಿದರು.
