ಬೆಳಗಾವಿ: ರಾಜ್ಯದ ಪಡಿತರ ವ್ಯವಸ್ಥೆಯನ್ನು ಪಾರದರ್ಶಕ ಮತ್ತು ಫಲಾನುಭವಿಗಳಿಗೆ ಅನುಕೂಲಕರವಾಗಿಸಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಬೆಳಗಾವಿ ಮತ್ತು ಕಲಬುರಗಿ ವಿಭಾಗದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ರೇಷನ್ ಕಾರ್ಡ್ ಪರಿಷ್ಕರಣೆ, ಇ-ಕೆವೈಸಿ, ನ್ಯಾಯಬೆಲೆ ಅಂಗಡಿಗಳ ಸುಧಾರಣೆ ಹಾಗೂ ರೈತರ ಹಿತಾಸಕ್ತಿಗೆ ಸಂಬಂಧಿಸಿದ ಹಲವು ನಿರ್ಣಯಗಳನ್ನು ಪ್ರಕಟಿಸಿದರು.
ಪಡಿತರ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಪೂರ್ಣಗೊಳಿಸಬೇಕು ಎಂದು ಸಚಿವರು ಸೂಚಿಸಿದರು. ಪರಿಷ್ಕರಣೆ ವೇಳೆ ಅರ್ಹ ಫಲಾನುಭವಿಗಳ ಕಾರ್ಡ್ಗಳು ತಪ್ಪಾಗಿ ಎಪಿಎಲ್ಗೆ ಬದಲಾಗಿದ್ದರೆ, ಸಂಬಂಧಪಟ್ಟ ತಾಲ್ಲೂಕು ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದಲ್ಲಿ ಪರಿಶೀಲನೆ ನಡೆಸಿ ಪುನಃ ಬಿಪಿಎಲ್ಗೆ ವರ್ಗಾಯಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಯಾವುದೇ ಕಾರಣಕ್ಕೂ ಅರ್ಹ ಫಲಾನುಭವಿಗಳ ಕಾರ್ಡ್ಗಳನ್ನು ರದ್ದುಪಡಿಸಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ತಾಲ್ಲೂಕು ಮಟ್ಟದ ಅಧಿಕಾರಿಗಳು ಅರ್ಹ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ ಪಡಿತರ ಕಾರ್ಡ್ ಪರಿಶೀಲನೆ ನಡೆಸಿ, ಸತ್ಯಾಂಶದ ವರದಿಯನ್ನು ಒಂದು ವಾರದೊಳಗೆ ಸಲ್ಲಿಸಬೇಕು ಎಂದು ಸೂಚಿಸಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾನದಂಡಗಳ ಪ್ರಕಾರ ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ಮಾತ್ರ ಎಪಿಎಲ್ಗೆ ವರ್ಗಾಯಿಸಬೇಕು ಎಂದು ಸಚಿವರು ಹೇಳಿದರು. ರಾಜ್ಯದಲ್ಲಿ ಸುಮಾರು 13 ಲಕ್ಷ ಅನರ್ಹ ಕಾರ್ಡ್ಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂಬ ಮಾಹಿತಿ ಸಭೆಯಲ್ಲಿ ಚರ್ಚೆಗೆ ಬಂದಿತು.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ, ಒಳ ಮೀಸಲಾತಿ ಆಧಾರದ ಮೇಲೆ ಸುಮಾರು 3,517 ನೂತನ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡಲು ಒಂದು ತಿಂಗಳೊಳಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುನಿಯಪ್ಪ ಘೋಷಿಸಿದರು. ಇದು ರಾಷ್ಟ್ರದಲ್ಲೇ ಮೊದಲ ಬಾರಿಗೆ ಅನುಷ್ಠಾನಗೊಳ್ಳುತ್ತಿರುವ ಕ್ರಮ ಎಂದು ಅವರು ಹೇಳಿದರು. ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಪಾಸ್ ವ್ಯವಸ್ಥೆ ಹಾಗೂ ಎಲೆಕ್ಟ್ರಾನಿಕ್ ತೂಕ ಯಂತ್ರಗಳನ್ನು ಕಡ್ಡಾಯವಾಗಿ ಅಳವಡಿಸಲು ಸೂಚನೆ ನೀಡಿದ್ದು, ಅಂಗಡಿ ಮಾಲೀಕರಿಗೆ ಬರುವ ಕಮಿಷನ್ ಮತ್ತು ಚಿಲ್ಲರೆ ಲಾಭಾಂಶವನ್ನು ಸರಿಯಾದ ಸಮಯಕ್ಕೆ ಪಾವತಿಸಲಾಗುವುದು ಎಂದು ಭರವಸೆ ನೀಡಿದರು.
ರೇಷನ್ ಕಾರ್ಡ್ ಪರಿಷ್ಕರಣೆಯ ಭಾಗವಾಗಿ, ರಾಜ್ಯದಲ್ಲಿ ಬಾಕಿ ಇರುವ 3 ಲಕ್ಷ 96 ಸಾವಿರ ಪಡಿತರ ಕಾರ್ಡ್ಗಳನ್ನು ಒಂದು ತಿಂಗಳೊಳಗೆ ಪರಿಶೀಲಿಸಿ ನೂತನ ಕಾರ್ಡ್ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಇತರೆ ರಾಜ್ಯಗಳ ಮಾನದಂಡಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸಿ, ಅವುಗಳನ್ನು ಅಗತ್ಯವಿದ್ದಲ್ಲಿ ಕರ್ನಾಟಕಕ್ಕೆ ಅನ್ವಯಿಸುವಂತೆ ಪರಿಶೀಲನೆ ನಡೆಸಬೇಕು ಎಂದು ಸಚಿವರು ಹೇಳಿದರು.
ಕೃಷಿ ಕ್ಷೇತ್ರದ ವಿಷಯದಲ್ಲಿ ಮಾತನಾಡಿದ ಮುನಿಯಪ್ಪ, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಈ ವರ್ಷ ಪ್ರತಿ ಕ್ವಿಂಟಾಲ್ ರಾಗಿಗೆ ₹4,886 ದರದಲ್ಲಿ ಖರೀದಿ ನಡೆಯುತ್ತಿದೆ ಎಂದು ತಿಳಿಸಿದರು. ಈಗಾಗಲೇ 6 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ರೈತರು ನೋಂದಣಿ ಮಾಡಿಕೊಂಡಿದ್ದು, ಇದರಿಂದ ಸುಮಾರು ₹3,000 ಕೋಟಿ ಮೌಲ್ಯದ ಲಾಭ 2.57 ಲಕ್ಷ ರೈತರಿಗೆ ದೊರೆಯಲಿದೆ ಎಂದು ವಿವರಿಸಿದರು.
ಕಾನೂನು ಮಾಪನ ಶಾಸ್ತ್ರ ಇಲಾಖೆಯ ವತಿಯಿಂದ ಬೆಳಗಾವಿ ಮತ್ತು ಕಲಬುರಗಿ ವಿಭಾಗದಲ್ಲಿ 71 ಸಕ್ಕರೆ ಕಾರ್ಖಾನೆಗಳ ತಪಾಸಣೆ ನಡೆಸಲಾಗಿದ್ದು, ಕಬ್ಬು ಬೆಳೆಗಾರರಿಗೆ ಆಗುತ್ತಿದ್ದ ತೂಕದ ಲೋಪದೋಷಗಳನ್ನು ಸರಿಪಡಿಸಲಾಗಿದೆ ಎಂದು ಸಚಿವರು ಹೇಳಿದರು. ತೂಕದ ಮೋಸ ತಡೆಗಟ್ಟಲಾಗಿದ್ದು, ಇದುವರೆಗೆ ಸುಮಾರು ₹50 ಸಾವಿರ ಕೋಟಿ ಅಭಿಸಂಧಾನ ಶುಲ್ಕ ವಸೂಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಸರ್ಕಾರದ ಕಾರ್ಯದರ್ಶಿ ಪ್ರಸಾದ್ ಎನ್.ವಿ, ಆಯುಕ್ತೆ ಎಂ. ಕನಗವಲ್ಲಿ, ಕಾನೂನು ಮಾಪನ ಇಲಾಖೆಯ ನಿಯಂತ್ರಕ ಎಂ.ಎಸ್.ಎನ್. ಬಾಬು, ನಿಗಮ ನಿರ್ದೇಶಕ ಜಗದೀಶ್, ಸಚಿವರ ಆಪ್ತ ಕಾರ್ಯದರ್ಶಿ ಡಾ. ಹೆಚ್. ನಟರಾಜ್, ಜಂಟಿ ನಿರ್ದೇಶಕರು, ಪಡಿತರ ವಿತರಕರ ಸಂಘದ ಪ್ರತಿನಿಧಿಗಳು ಮತ್ತು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
