ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ನಾಗರಿಕರ ಅಹವಾಲುಗಳನ್ನು ಸಮಗ್ರವಾಗಿ ಆಲಿಸಿ, ತ್ವರಿತ ಪರಿಹಾರ ನೀಡುವ ಉದ್ದೇಶದಿಂದ, ಆಯುಕ್ತ ಕೆ.ಎನ್. ರಮೇಶ್ ಪ್ರತೀ ವಾರ ಒಂದು ವಾರ್ಡ್ಗೆ ಖುದ್ದಾಗಿ ಭೇಟಿ ನೀಡುವ ಹೊಸ ಕ್ರಮವನ್ನು ಘೋಷಿಸಿದ್ದಾರೆ.
ಅಪಾರ್ಟ್ಮೆಂಟ್ ಅಸೋಸಿಯೇಷನ್ಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಸ್ಥಳೀಯ ಸಂಘಟನೆಯ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ನಂತರ ಮಾತನಾಡಿದ ರಮೇಶ್, ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ 72 ವಾರ್ಡ್ಗಳಿದ್ದು, ಪ್ರತೀ ವಾರ ಒಂದೊಂದು ವಾರ್ಡ್ಗೆ ಭೇಟಿ ನೀಡಿ ನಾಗರಿಕರ ಸಮಸ್ಯೆಗಳನ್ನು ನೇರವಾಗಿ ಆಲಿಸಲಾಗುವುದು ಎಂದು ಹೇಳಿದರು.
“ನಾಗರಿಕರ ಅಹವಾಲುಗಳಿಗೆ ವಾರ್ಡ್ ಮಟ್ಟದಲ್ಲೇ ಪರಿಹಾರ ನೀಡುವ ಜವಾಬ್ದಾರಿ ನಮ್ಮದು. ಅಧಿಕಾರಿಗಳ ನಿಯೋಗದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಆಯುಕ್ತರು ಭರವಸೆ ನೀಡಿದರು.
ನಾಗರಿಕರು ಸಭೆಯಲ್ಲಿ ಮುಖ್ಯವಾಗಿ ಈ ಸಮಸ್ಯೆಗಳನ್ನು ಉಲ್ಲೇಖಿಸಿದರು:
• ಮಳೆ ನೀರುಗಾಲುವೆಗಳಲ್ಲಿ ಒತ್ತುವರಿ ಮತ್ತು ಅಡ್ಡಿ
• ಪಾದಚಾರಿ ಮಾರ್ಗಗಳ encroachment
• ಬೀದಿ ದೀಪ ದುರಸ್ಥಿ ಮತ್ತು ಅಳತೆ ಸಮಸ್ಯೆಗಳು
• ಘನ ತ್ಯಾಜ್ಯ ಸಂಗ್ರಹಣೆ–ವಿಲೇವಾರಿ ಅಸಮರ್ಪಕತೆ
• ರಸ್ತೆ ಗುಂಡಿಗಳು ಮತ್ತು ದುರಸ್ಥಿ
• ಅನಧಿಕೃತ ಕಟ್ಟಡ ನಿರ್ಮಾಣ
• ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳು
• ಸಾರ್ವಜನಿಕ ಶೌಚಾಲಯಗಳ ನಿರ್ವಹಣಾ ಕೊರತೆ
ಈ ಸಮಸ್ಯೆಗಳಲ್ಲಿ ಕೆಲವು ಮೈಕ್ರೋ ಹಂತದ ಯೋಜನೆ ಅಗತ್ಯವಿದ್ದು, ನಾಗರಿಕರ ಸಹಕಾರವೂ ಅವಶ್ಯಕ ಎಂದು ರಮೇಶ್ ಹೇಳಿದರು.
ಯಲಚೇನಹಳ್ಳಿ, ಕೋಣನಕುಂಟೆ, ಜೆಪಿ ನಗರ, ಬಿಟಿಎಂ ಲೇಔಟ್, ಹೆಚ್ಎಸ್ಆರ್ ಲೇಔಟ್, ಪುಟ್ಟೇನಹಳ್ಳಿ ಸೇರಿದಂತೆ ಅನೇಕ ಪ್ರದೇಶಗಳ ಅಪಾರ್ಟ್ಮೆಂಟ್ ಅಸೋಸಿಯೇಶನ್ಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.
