Home Uncategorized Onion, Tomato Price: ಈರುಳ್ಳಿ, ಟೊಮೆಟೊ ಬೆಲೆ ಕುಸಿತ; ಕರ್ನಾಟಕದ ರೈತರು ಕಂಗಾಲು

Onion, Tomato Price: ಈರುಳ್ಳಿ, ಟೊಮೆಟೊ ಬೆಲೆ ಕುಸಿತ; ಕರ್ನಾಟಕದ ರೈತರು ಕಂಗಾಲು

34
0

ಬೆಂಗಳೂರು: ಉತ್ತಮ ಇಳುವರಿ ದೊರೆತಿರುವ ಸಂದರ್ಭದಲ್ಲೇ ಈರುಳ್ಳಿ (Onion Price), ಟೊಮೆಟೊ ಬೆಲೆ (Tomato Price) ಗಣನೀಯವಾಗಿ ಕುಸಿದಿರುವುದು ಕರ್ನಾಟಕದ ರೈತರನ್ನು (Karnataka Farmers) ಕಂಗಾಲಾಗಿಸಿದೆ. ಈರುಳ್ಳಿ ಹಾಗೂ ಟೊಮೆಟೊಗೆ ಕನಿಷ್ಠ ಬೆಂಬಲ ಬೆಲೆ (Minimum Support Price) ನಿಗದಿಪಡಿಸುವಂತೆ ಕೋಲಾರ ಜಿಲ್ಲೆಯ ತರಕಾರಿ ಬೆಳೆಗಾರರ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಕೆಲವು ದಿನಗಳ ಹಿಂದೆಯೇ ಈರುಳ್ಳಿ ಬೆಲೆ ಗಣನೀಯವಾಗಿ ಕುಸಿದಿದ್ದು, ಒಂದು ಕೆಜಿಗೆ 2 ರೂ.ನಿಂದ 10 ರೂ. ವರೆಗೆ ಮಾರಾಟವಾಗುತ್ತಿತ್ತು ಎಂದು ಬೆಂಗಳೂರಿನ ಯಶವಂತಪುರ ಎಪಿಎಂಸಿ ಮೂಲಗಳು ತಿಳಿಸಿವೆ. ಆದಾಗ್ಯೂ, ಸದ್ಯ ಈರುಳ್ಳಿ ಬೆಲೆ ತುಸು ಸ್ಥಿರವಾಗಿದ್ದು, ಒಂದು ಕೆಜಿಗೆ 12ರಿಂದ 18 ರೂ. ವರೆಗೆ ಮಾರಾಟವಾಗುತ್ತಿದೆ ಎಂಬುದು ತಿಳಿದುಬಂದಿದೆ.

ಬೆಳೆಗಾರರಿಗೆ ಕಣ್ಣೀರು ತರಿಸುವ ಈರುಳ್ಳಿ

‘ಒಂದು ಕೆಜಿ ಈರುಳ್ಳಿಗೆ 12 ರೂ.ನಂತೆ ದೊರೆತರೂ ನಮಗೆ ಕಷ್ಟವೇ. ಸಾಗಾಟ, ಲೋಡಿಂಗ್, ಅನ್​ಲೋಡಿಂಗ್ ವೆಚ್ಚ, ಈರುಳ್ಳಿ ಬೆಳೆಗೆ ಮಾಡುವ ಹೂಡಿಕೆಗೆ ಮುಂದೆ ಈ ದರ ಏನೂ ಅಲ್ಲ’ ಎಂದು ಈರುಳ್ಳಿ ಬೆಳೆಗಾರರೊಬ್ಬರು ಬೆಂಗಳೂರಿನಲ್ಲಿ ಸಂಕಷ್ಟ ತೋಡಿಕೊಂಡಿದ್ದಾರೆ. ರಾಜ್ಯದ ವಿವಿಧ ಮೂಲೆಗಳಿಂದ ಈರುಳ್ಳಿ ಬೆಳೆದು ಉತ್ತಮ ದರ ದೊರೆಯಬಹುದೆಂದು ರಾಜಧಾನಿಗೆ ತಂದರೆ ಇಲ್ಲಿ ನಿರಾಸೆಯಾಗುತ್ತಿದೆ ಎಂದು ಕೆಲವು ಬೆಳೆಗಾರರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Tomato Price: ಉತ್ತಮ ಇಳುವರಿಯನ್ನು ಕಂಡರೂ ಸಿಗದ ಸೂಕ್ತ ಬೆಲೆ; ಸಂಕಷ್ಟಕ್ಕೆ ಸಿಲುಕಿದ ಟೊಮೆಟೊ ಬೆಳೆಗಾರರು

‘ಈ ಬಾರಿ ಉತ್ತಮ ಈರುಳ್ಳಿ ಇಳುವರಿ ಬಂದಿದೆ. ಗದಗ ಎಪಿಎಂಸಿಯಲ್ಲಿ ಮಾರಾಟ ಮಾಡುವ ಬದಲು ಉತ್ತಮ ಬೆಲೆ ದೊರೆಯಬಹುದೆಂದು ಬೆಂಗಳೂರಿಗೆ ತೆಗೆದುಕೊಂಡು ಬಂದೆ. ಆದರೆ, ಬೆಂಗಳೂರಿಗೆ ತರುವಷ್ಟರಲ್ಲಿ ಈರುಳ್ಳಿ ದರ ಕೆಜಿಗೆ 2 ರೂ.ಗೆ ಇಳಿಕೆಯಾಗಿತ್ತು. ಕೇವಲ 410 ರೂ. ದೊರೆಯಿತು. ಸಾಗಾಟ, ಅನ್​ಲೋಡಿಂಗ್​ಗೇ 401.64 ರೂ. ಖರ್ಚಾಯಿತು. ನನಗೆ ದೊರೆತದ್ದು ಕೇವಲ 8.36 ರೂ.’ ಎಂದು ಎಂದು ಗದಗ ಜಿಲ್ಲೆಯ ತಿಮ್ಮಾಪುರದ ರೈತ ಪವದೆಪ್ಪ ಹಳ್ಳಿಕೇರಿ ಅಳಲು ತೋಡಿಕೊಂಡಿದ್ದಾರೆ.

ಉತ್ತಮ ಆದಾಯ ದೊರೆಯಬಹುದೆಂದು ಈರುಳ್ಳಿ ಬೆಳೆದು ಬೆಂಗಳೂರಿಗೆ ತಂದಿರುವುದೇ ದೊಡ್ಡ ತಪ್ಪು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕರ್ನಾಟಕ ಟೊಮೆಟೊ ಬೆಳೆಗಾರರಿಗೂ ಸಮಸ್ಯೆ

ದಕ್ಷಿಣ ಕರ್ನಾಟಕದ ಟೊಮೆಟೊ ಬೆಳೆಗಾರರೂ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಸಗಟು ಮಾರುಕಟ್ಟೆಯಲ್ಲಿ ಒಂದು ಕೆಜಿ ಟೊಮೆಟೊ 5 ರೂ.ನಂತೆ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ 8ರಿಂದ 12 ರೂ.ನಂತೆ ಮಾರಾಟವಾಗುತ್ತಿದೆ ಎಂದು ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯ ತರಕಾರಿ ಡೀಲರ್ ಮಂಜುನಾಥ್ ತಿಳಿಸಿದ್ದಾರೆ. ಟೊಮೆಟೊಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವಂತೆ ಕೋಲಾರ ಜಿಲ್ಲೆಯ ಹಣ್ಣು ಮತ್ತು ತರಕಾರಿ ಬೆಳೆಗಾರರ ಸಮಿತಿಯ ಅಧ್ಯಕ್ಷ ನೀಲತುರು ಚಿನ್ನಪ್ಪ ರೆಡ್ಡಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

‘ತರಕಾರಿ ಬೆಳೆಗಾರರು ಬೆಲೆ ಕುಸಿತದಿಂದ ಸಂಕಷ್ಟಕ್ಕೀಡಾಗಿದ್ದಾರೆ. ಕಠಿಣ ಶ್ರಮ, ಕೂಲಿ, ಹೂಡಿಕೆ ಮಾಡಿ ತಿಂಗಳುಗಟ್ಟಲೆ ಕಾದ ಹೊರತಾಗಿಯೂ ಒಂದು ಕೆಜಿ ಟೊಮೆಟೊವನ್ನು 1.5 ರೂ.ಗೆ ಮಾರಾಟ ಮಾಡಬೇಕಾದ ಸ್ಥಿತಿ ಬಂದಿದೆ. ಕ್ವಿಂಟಲ್​ ಟೊಮೆಟೊ ಬೆಳೆದವರಿಗೆ ಕೇವಲ 300 ರೂ. ಸಿಗುತ್ತಿದೆ’ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here