ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ನಿವಾಸದ ಬಳಿ ಸಾರ್ವಜನಿಕ ಅಹವಾಲು ಸ್ವೀಕರಿಸಿದರು. ಬಳಿಕ ಮೈಲಾರಿ ಹೋಟೆಲ್ ನಲ್ಲಿ ಬೆಳಗಿನ ಉಪಹಾರ ಸವಿದರು.
ಮೈಸೂರು: ದ್ವೇಷ ಅಥವಾ ಪ್ರಚೋದನಕಾರಿ ಭಾಷಣ ಮಾಡುವವರಿಗಷ್ಟೇ ದ್ವೇಷ ಭಾಷಣ ತಡೆ ಮಸೂದೆ ಭಯವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಪ್ರಚೋದನಕಾರಿ ಭಾಷಣ ಮಾಡದೇ ಇದ್ದರೆ ಸುಮ್ಮನೆ ಯಾರ ಮೇಲೂ ಪ್ರಕರಣ ದಾಖಲಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮೈಸೂರಿನಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಬಿಜೆಪಿಯವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ಏಕೆ ನೋಡಿಕೊಳ್ಳುತ್ತಾರೆ?” ಎಂದು ಪ್ರಶ್ನಿಸಿ, ಮಸೂದೆ ವಿರೋಧದ ಹಿಂದೆ ಇರುವ ರಾಜಕೀಯ ಉದ್ದೇಶಗಳ ಬಗ್ಗೆ ತೀವ್ರ ಟೀಕೆ ನಡೆಸಿದರು.
ಕಾನೂನು ಎಲ್ಲರಿಗೂ ಅನ್ವಯ
ದ್ವೇಷ ಭಾಷಣ ತಡೆ ಮಸೂದೆ ಕೆಲವರನ್ನು ಗುರಿಯಾಗಿಸಿಕೊಂಡು ರೂಪಿಸಲಾಗಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ,
“ಈ ಕಾಯ್ದೆ ಎಲ್ಲಾ ಪಕ್ಷಗಳಿಗೂ ಅನ್ವಯವಾಗುತ್ತದೆ. ಬಿಜೆಪಿ ಮಾತ್ರವೇ ಇದನ್ನು ಏಕೆ ವಿರೋಧಿಸುತ್ತಿದೆ?” ಎಂದು ಪ್ರಶ್ನಿಸಿದರು.
“ದ್ವೇಷ ಭಾಷಣದಿಂದ ಸಮಾಜದಲ್ಲಿ ಶಾಂತಿ ನೆಲೆಸುತ್ತದೆಯೇ?” ಎಂದು ಪ್ರಶ್ನಿಸಿದ ಅವರು, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಭಾತೃತ್ವ ಕಾಪಾಡುವುದಕ್ಕಾಗಿ ಈ ಮಸೂದೆ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.
ದ್ವೇಷ ಭಾಷಣ ಹೆಚ್ಚಳ ಹಿನ್ನೆಲೆ
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ದ್ವೇಷ ಭಾಷಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಸಿಎಂ,
“ಅದನ್ನು ನಿಯಂತ್ರಿಸಲು ಈ ಮಸೂದೆ ಅಗತ್ಯವಾಗಿದೆ. ಬಿಜೆಪಿ ಇದನ್ನು ತೀವ್ರವಾಗಿ ವಿರೋಧಿಸುತ್ತಿರುವುದಕ್ಕೆ ಕಾರಣ, ಅವರು ದ್ವೇಷ ಭಾಷಣ ಮಾಡುತ್ತಾರೆ ಎಂಬ ಅನುಮಾನ ಮೂಡುತ್ತಿದೆ” ಎಂದು ಆರೋಪಿಸಿದರು.
ಸರ್ಕಾರ ಯಾವುದೇ ಕಾರಣಕ್ಕೂ ಕಾನೂನನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪ್ರಚೋದನಕಾರಿ ಭಾಷಣ ಮಾಡಿದವರ ವಿರುದ್ಧ ಮಾತ್ರ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
