Home ಬೆಂಗಳೂರು ನಗರ ಬಿಜೆಪಿ ಮಾಡಿದರೆ ಸರಿ, ಕಾಂಗ್ರೆಸ್ ಮಾಡಿದರೆ ತಪ್ಪೇ?: ಡಿಸಿಎಂ ಡಿ.ಕೆ. ಶಿವಕುಮಾರ್‌

ಬಿಜೆಪಿ ಮಾಡಿದರೆ ಸರಿ, ಕಾಂಗ್ರೆಸ್ ಮಾಡಿದರೆ ತಪ್ಪೇ?: ಡಿಸಿಎಂ ಡಿ.ಕೆ. ಶಿವಕುಮಾರ್‌

11
0
Operation Hand: If BJP does it right, if Congress does it wrong?: DCM DK Shivakumar
Operation Hand: If BJP does it right, if Congress does it wrong?: DCM DK Shivakumar

ಬೆಂಗಳೂರು:

“ಬಿಜೆಪಿಯವರು ಮಾಡಿದರೆ ಸರಿ, ನಾವು ಮಾಡಿದರೆ ತಪ್ಪೇ? ‘ತಾನು ಕಳ್ಳ, ಪರರನ್ನು ನಂಬ’ ಎನ್ನುವಂತಹ ಸ್ಥಿತಿ ಬಿಜೆಪಿಯದ್ದು. ಕರ್ನಾಟಕವೂ ಸೇರಿದಂತೆ ಮಧ್ಯಪ್ರದೇಶ, ಮಹಾರಾಷ್ಟ್ರ ಇಲ್ಲೆಲ್ಲಾ ಏನು ಮಾಡಿತ್ತು ಬಿಜೆಪಿ? ಆಯಾಯ ಪರಿಸ್ಥಿತಿಗೆ ಏನು ಬೇಕು ಅದು ಕಾಲ, ಕಾಲಕ್ಕೆ ನಡೆಯುತ್ತದೆ. ಕಾಂಗ್ರೆಸ್‌ ಪಕ್ಷ ಸಮುದ್ರ ಇದ್ದಂತೆ” ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಅವರು ನುಡಿದರು.

ಸದಾಶಿವನಗರ ನಿವಾಸ ಹಾಗೂ ಈಜೀಪಿರದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದರು. ಕಾಂಗ್ರೆಸ್‌ ತನ್ನ ತಪ್ಪುಗಳನ್ನು ಮುಚ್ಚಿಹಾಕಲು ಆಪರೇಷನ್‌ ಹಸ್ತ ನಡೆಸುತ್ತಿದೆ ಎನ್ನುವ ಬಿಜೆಪಿ ನಾಯಕರ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, “ಉತ್ತಮ ರಾಜಕೀಯ ಭವಿಷ್ಯ ನಿರ್ಮಾಣ ಮಾಡಿಕೊಳ್ಳಬೇಕು. ಒಳ್ಳೆಯದು, ಕೆಟ್ಟದ್ದು ವ್ಯಕ್ತಿಗತವಾದ ಆಲೋಚನೆ. ಪ್ರಜಾಪ್ರಭುತ್ವ ಉಳಿಯಬೇಕು, ಈ ದೇಶದಕ್ಕೆ, ರಾಜ್ಯಕ್ಕೆ ಉತ್ತಮ ಸೇವೆ ಸಲ್ಲಿಸಬೇಕು ಎಂಬುದು ಯಾರ್ಯಾರಿಗೆ ಇದೆಯೋ ಅಂತಹ ನಾಯಕರು ವೈಯಕ್ತಿಕ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದನ್ನ ನಾವು ನಿರ್ಬಂಧ ಮಾಡಲು ಆಗುತ್ತದೆಯೇ?” ಎಂದು ಕೇಳಿದರು.

“ಈ ಹಿಂದೆ ಯಾರ್ಯಾರು ಏನ್‌ ಮಾತನಾಡಿದರು, ಏನನ್ನು ಮಾತನಾಡಲು ಬಂದಿದ್ದರು ಅದನ್ನೆಲ್ಲಾ ಈಗ ಬಿಡಿಸಿ ಹೇಳಬೇಕೆ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೀವು ಈ ರೀತಿ ಇರಬೇಕು, ಈ ರೀತಿ ತೀರ್ಮಾನ ತೆಗದುಕೊಳ್ಳಬೇಕು ಎಂದು ನಿರ್ದೇಶನ ಮಾಡಲು ಆಗುವುದಿಲ್ಲ. ವಿಪಕ್ಷಗಳು ಏನು ಬೇಕಾದರೂ ಆರೋಪ ಮಾಡಲಿ ನಮಗೆ ತೊಂದರೆ ಇಲ್ಲ” ಎಂದು ಹೇಳಿದರು.

23 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಕೇಳಿದಾಗ “ಮೊದಲು ಅವರ ನಾಯಕರು ಯಾರು ಎಂದು ತೀರ್ಮಾನ ಮಾಡಿಕೊಂಡು ಆಮೇಲೆ ಹೋರಾಟ ಮಾಡಲಿ” ಎಂದು ಛೇಡಿಸಿದರು.

ಈಜಿಪುರ ಮೇಲ್ಸೇತುವೆ ಕಾಮಗಾರಿ ಕುರಿತು ಕೇಳಿದಾಗ, “ಈ ಮೇಲ್ಸೇತುವೆ 3ಕಿ.ಮೀ ಉದ್ದ ಇದ್ದು, ಬಹಳ ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. 2017ರಲ್ಲಿ ಈ ಯೋಜನೆ ಕಾಮಗಾರಿ ಆರಂಭವಾಗಿದ್ದು, ಕೇವಲ 35% ಮಾತ್ರ ಕೆಲಸ ಆಗಿದೆ. ಕಾಮಗಾರಿ ಮಾಡುತ್ತಿದ್ದ ಗುತ್ತಿಗೆ ಕಂಪನಿ ಸಮಸ್ಯೆ ಆಗಿ ಕೆಲಸ ನಿಂತಿದೆ. ಅವರಿಗೆ ನೊಟೀಸ್ ನೀಡಿ, ಟೆಂಡರ್ ಅನ್ನು ರದ್ದು ಮಾಡಿದ್ದೇವೆ. ಮತ್ತೆ ಹೊಸ ಟೆಂಡರ್ ಕರೆಯಲಾಗಿದ್ದು, ಬೇರೆಯವರು ಆಸಕ್ತಿ ತೋರುತ್ತಿಲ್ಲ. ಸಿಂಗಲ್ ಟೆಂಡರ್ ಆಗಿದ್ದು 19% ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ವಾಸ್ತವಾಂಶ ಅರಿಯಲು ಖುದ್ದಾಗಿ ನಾನು ಹಾಗೂ ರಾಮಲಿಂಗಾ ರೆಡ್ಡಿ ಅವರು ಬಂದಿದ್ದೇವೆ. ನಾನು ಸಚಿವನಾಗಿ ನಂತರ ರಾಮಲಿಂಗಾ ರೆಡ್ಡಿ ಅವರು ಈ ಕಾಮಗಾರಿ ಪೂರ್ಣಗೊಳಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಕಾಮಗಾರಿಯನ್ನು ಆದ್ಯತೆ ಮೇರೆಗೆ ತೆಗೆದುಕೊಳ್ಳುತ್ತೇವೆ. 100 ಕೋಟಿ ಹೆಚ್ಚುವರಿ ಹಣ ಬೇಕಾಗಿದ್ದು, ನಾವೇ ಈ ಯೋಜನೆ ಹೆಚ್ಚುವರಿ ಹಣ ನೀಡಬಹುದೇ ಅಥವಾ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡಬಹುದೇ ಎಂದು ಚರ್ಚೆ ಮಾಡುತ್ತೇವೆ” ಎಂದು ತಿಳಿಸಿದರು.

ಕೇವಲ ಒಬ್ಬರೇ ಟೆಂಡರ್ ನಲ್ಲಿ ಭಾಗವಹಿಸಿದ್ದಾರೆ ಎಂಬ ಪ್ರಶ್ನೆಗೆ, “ಒಬ್ಬರು ಮಾಡಿದ ಕೆಲಸಕ್ಕೆ ಬೇರೆಯವರು ಕೈ ಹಾಕಲು ಇಚ್ಛಿಸುವುದಿಲ್ಲ. ಹೀಗಾಗಿ ಕೇವಲ ಒಬ್ಬರು ಟೆಂಡರ್ ನಲ್ಲಿ ಭಾಗವಹಿಸಿದ್ದಾರೆ” ಎಂದು ತಿಳಿಸಿದರು.

LEAVE A REPLY

Please enter your comment!
Please enter your name here