ಬೆಂಗಳೂರು:
ಕಾಂಗ್ರೆಸ್ ನಲ್ಲಿ ಬೆಳೆಯಲು ಅವಕಾಶವಿರುವುದರಿಂದ ಮನಸಾರೆ ಕಾಂಗ್ರೆಸ್ ತತ್ವ ಸಿದ್ಧಾಂತವನ್ನು ಒಪ್ಪಿ ಕಾಂಗ್ರೆಸ್ ಅನ್ನು ಸೇರುತ್ತಿದ್ದೇನೆ ಎಂದು ಸೊರಬ ಮಾಜಿ ಶಾಸಕ ಎಸ್.ಮಧುಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ಚುನಾವಣೆ ಎಂಬುದು ಒಂದು ರೀತಿಯಲ್ಲಿ ಪರೀಕ್ಷೆಯಿದ್ದಂತೆ.ಈ ಚುನಾವಣಾ ಪರೀಕ್ಷೆಯಲ್ಲಿ ಪಾಸ್ ಫೇಲ್ ಇವೆರೆಡೇ ಆಯ್ಕೆಇರುವುದು.ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ನಾಯಕತ್ವಕ್ಕೆ ಸೋಲಾಯಿತೆಂಬುದಲ್ಲ.ನಾಯಕತ್ವ ಎಂದಿಗೂ ಸೋಲುವುದಿಲ್ಲ ಎಂದು ಮಧುಬಂಗಾರಪ್ಪ ಮಾರ್ಮಿಕವಾಗಿ ಹೇಳಿದ್ದಾರೆ.
ನಾನು ಜೆಡಿಎಸ್ ನಲ್ಲಿ ಎಂದಿಗೂ ಅಧಿಕಾರ ಅನುಭವಿಸಿಲ್ಲ.ಬರಲಿರುವ ಎಪ್ರಿಲ್ ತಿಂಗಳಿನಲ್ಲಿ ಬೃಹತ್ ಸಮಾವೇಶ ಆಯೋಜಿಸುತ್ತಿದ್ದು, ಸಮಾವೇಶದಲ್ಲಿಲಕ್ಷಾಂತರ ಜನರನ್ನು ಸೇರಿಸುತ್ತೇನೆ.ಸಮಾವೇಶದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಲು ತೀರ್ಮಾನ ಮಾಡಿದ್ದೇನೆ.
ಇಂದಿನಿಂದಲೇ ಕಾಂಗ್ರೆಸ್‌ಗಾಗಿ ಕೆಲಸ ಮಾಡಲು ಹಿರಿಯರಾದ ಸಿದ್ದರಾಮಯ್ಯ ಸೂಚಿಸಿದ್ದು ಅವರ ಸಲಹೆ ಸೂಚನೆಯಂತೆ ನಡೆಯುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷದ ನಿಲುವು ಮತ್ತು ಧ್ಯೇಯಗಳನ್ನು ಒಪ್ಪಿ ಪಕ್ಷಕ್ಕೆ ಸೇರಲು ನಿರ್ಧರಿಸಿ, ಇಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮಾಜಿ ಮುಖ್ಯಮಂತ್ರಿಗಳು ಆದ ಶ್ರೀ ಸಿದ್ದರಾಮಯ್ಯ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿ, ಅವರ ಮಾರ್ಗದರ್ಶನ ಕೋರಿದೆನು….@siddaramaiah @INCIndia @INCKarnataka pic.twitter.com/iJcMlnayFB
— Madhu Bangarappa (@MadhuBangarapp2) March 11, 2021
ಸಿದ್ದರಾಮಯ್ಯ ಈ ಹಿಂದೆ ಕಾಂಗ್ರೆಸ್‌ನಲ್ಲಿ ಸಿಎಂ ಆಗಿದ್ದವರು.ನಮ್ಮ ತಂದೆ ಬಂಗಾರಪ್ಪ ಸಹ ಸಿಎಂ ಆಗಿದ್ದವರು.ಹೀಗಾಗಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದೇನೆ.ನಾಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನೂ ಸಹ ಭೇಟಿ ಮಾಡಿ ಚರ್ಚಿಸುತ್ತೇನೆ ಎಂದರು.
ದ್ರೋಹ ಮಾಡಿದ್ದಾರೆ ಎಂಬ ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಲು ಇಚ್ಛಿಸದ ಮಧುಬಂಗಾರಪ್ಪ,ಕುಮಾರಸ್ವಾಮಿ ಅವರ ಬಗ್ಗೆ ವೈಯಕ್ತಿಕ ಗೌರವವಿದೆ.ನನ್ನ, ಕುಮಾರಸ್ವಾಮಿ ನಡುವೆ ವೈಯಕ್ತಿಕ ಸಿಟ್ಟಿಲ್ಲ ಎಂದಷ್ಟೇ ಹೇಳಿದರು.
ಪ್ರಸಕ್ತ ಸಂದರ್ಭದಲ್ಲಿ ದೇಶಕ್ಕೆ ಕಾಂಗ್ರೆಸ್‌ನ ಅಗತ್ಯತೆ ಇದೆ.ಮನಸಾರೆ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದೇನೆ ಎಂದು ಮಧುಬಂಗಾರಪ್ಪ ಸ್ಪಷ್ಟಪಡಿಸಿದರು.