ಬೆಂಗಳೂರು:
ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಹತ್ವದ ಹೆಜ್ಜೆಯಿಟ್ಟಿದ್ದಾರೆ. ರಾಜ್ಯದಲ್ಲಿ ಅಂಗಾಂಗ ದಾನಿಗಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಅಂಗಾಂಗ ದಾನ ಪ್ರತಿಜ್ಞೆ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ. ಆಯುಷ್ಮಾನ್ ಭವ ಡಿಜಿಟಲ್ ಮಿಷನ್ (ABDM) ಅಡಿಯಲ್ಲಿ notto website ಲಿಂಕ್ ಮೂಲಕ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವುದರ ಮೂಲಕ ಜನ ಸಾಮಾನ್ಯರು ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಬಹುದಾಗಿದೆ.
ಬೆಂಗಳೂರಿನ ವಿಕಾಸ ಸೌಧದಲ್ಲಿ ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಕ್ಯೂ ಆರ್ ಕೋಡ್ ಬಿಡುಗಡೆಗೊಳಿಸಿದರು. ಅಂಗಾಂಗ ದಾನ ನೊಂದಣಿಗೆ ಹೆಚ್ಚು ಪ್ರೋತ್ಸಾಹ ಸ್ವತಃ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಂಗಾಂಗ ದಾನ ಪ್ರತಿಜ್ಞೆ ಸ್ವೀಕರಿಸುವುದಾಗಿ ಹೇಳಿದರು. ಇದೇ ವೇಳೆ ವೈದ್ಯಕೀಯ ಶಿಕ್ಷಣ ಸಚಿವ ಶರಣು ಪ್ರಕಾಶ್ ಪಾಟೀಲ್ ಅವರು ಕೂಡ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ತಾವು ಅಂಗಾಂಗ ದಾನ ಮಾಡುವ ಪ್ರತಿಜ್ಞೆ ಸ್ವೀಕರಿಸುವುದಾಗಿ ಹೇಳಿದರು.
ಆಯುಷ್ಮಾನ್ ಭವ ಆರೋಗ್ಯ ಮೇಳದಲ್ಲಿ ಅಂಗಾಂಗ ದಾನದ ಮಹತ್ವವನ್ನು ಕೂಡ ಪ್ರಚಾರ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಆರೋಗ್ಯ ಮೇಳಗಳಲ್ಲಿ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡುವವರನ್ನು ಸ್ಥಳದಲ್ಲಿಯೇ ಪ್ರೋತ್ಸಾಹಿಸಲಾಗುತ್ತಿದೆ.
ಈಗಾಗಲೇ ಆರೋಗ್ಯ ಮೇಳದ ಅಂಗವಾಗಿ ಅಂಗಾಂಗ ದಾನಕ್ಕೆ ಪ್ರತಿಜ್ಞೆಮಾಡುವಲ್ಲಿ ಕರ್ನಾಟಕವು ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿರುತ್ತದೆ.
ಆರೋಗ್ಯ ಮೇಳದ ಅಂಗವಾಗಿ 6,141 ಜನರು ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿರುತ್ತಾರೆ. ಕರ್ನಾಟಕ ರಾಜ್ಯದ ಜೀವಸಾರ್ಥಕತೆ ಕ್ಯೂ ಆರ್ ಕೋಡ್ ನಲ್ಲಿ ಒಟ್ಟು 35 ಸಾವಿರಕ್ಕೂ ಹೆಚ್ವು ಜನರು ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿರುತ್ತಾರೆ.
ಅಂಗಾಂಗ ದಾನಕ್ಕೆ ಮನಸು ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬದಲಾದ ಜೀವನ ಶೈಲಿಗಳಿಂದ ಕಿಡ್ನಿ, ಲಿವರ್, ಹೃದಯ ಇವುಗಳ ಕಸಿಗಾಗಿ ಒಟ್ಟಾರೆ 7 ಸಾವಿರಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿರುತ್ತಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವರುಗಳಾದ ದಿನೇಶ್ ಗೂಂಡರಾವ್ ಹಾಗೂ ಶರಣ ಪ್ರಕಾಶ್ ಪಾಟೀಲ ಕ್ಯೂ ಆರ್ ಕೋಡ್ ಪ್ರದರ್ಶಿಸುವ ಮೂಲಕ ಅಂಗಾಂಗ ದಾನಕ್ಕೆ ಕರೆ ನೀಡಿದ್ದಾರೆ.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಮತ್ತು ಇತರೆ ಸಿಬ್ಬಂದಿ ವರ್ಗದವರೂ ಕೂಡಾ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡುವುದರ ಮೂಲಕ ಸಾರ್ವಜನಿಕರಿಗೆ ಮಾದರಿಯಾಗಬೇಕೆಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ.