Home High Court/ಹೈಕೋರ್ಟ್ ಗೌರವ ಮತ್ತು ನಂಬಿಕೆಗೆ ಹೆಚ್ಚು ಪಾತ್ರವಾಗಿರುವುದು ನಮ್ಮ ನ್ಯಾಯಾಂಗ ವ್ಯವಸ್ಥೆ: ಯಡಿಯೂರಪ್ಪ

ಗೌರವ ಮತ್ತು ನಂಬಿಕೆಗೆ ಹೆಚ್ಚು ಪಾತ್ರವಾಗಿರುವುದು ನಮ್ಮ ನ್ಯಾಯಾಂಗ ವ್ಯವಸ್ಥೆ: ಯಡಿಯೂರಪ್ಪ

82
0

ಬೆಂಗಳೂರು:

ದೇಶದಲ್ಲಿ ಈಗಲೂ ಸಹ ಸಾರ್ವಜನಿಕರ ಗೌರವ ಮತ್ತು ನಂಬಿಕೆಗೆ ಹೆಚ್ಚು ಪಾತ್ರವಾಗಿರುವುದು ನಮ್ಮ ನ್ಯಾಯಾಂಗ ವ್ಯವಸ್ಥೆಯಾಗಿದ್ದು, ನಮ್ಮ ನ್ಯಾಯಾಂಗ ವ್ಯವಸ್ಥೆಯು ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನ ದಾವೆಗಳನ್ನು ನಿಭಾಯಿಸುವ ಶಕ್ತಿಯುತವಾದ ವ್ಯವಸ್ಥೆಯನ್ನು ಹೊಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.

ಕರ್ನಾಟಕ ಉಚ್ಛ ನ್ಯಾಯಾಲಯ, ಕರ್ನಾಟಕ ನ್ಯಾಯಾಂಗ ಅಕಾಡೆಮಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ ಜಂಟಿಯಾಗಿ ಶನಿವಾರ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಾಗಾರಿ, ನೂತನ ಕಟ್ಟಡ ಉದ್ಘಾಟನೆ ಮತ್ತು ನೂತನ ಕಟ್ಟಡ ಅಡಿಗಲ್ಲು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಪ್ರತಿ ವ್ಯಕ್ತಿಯ ಹಕ್ಕನ್ನು ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವನ್ನುವಹಿಸಿದೆ ಎಂದರು.

CM laid foundation for Bengaluru Mediation Centre 1

ನ್ಯಾಯಾಂಗ ವ್ಯವಸ್ಥೆಗೆ ಮೂಲಸೌಕರ್ಯ ಒದಗಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಣೆಯಾಗಿದ್ದು, ಇಂದು ಉದ್ಘಾಟನೆಗೊಂಡಿರುವ ವಾಣಿಜ್ಯ ನ್ಯಾಯಾಲಯಗಳು ವಾಣಿಜ್ಯ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಿ ಕಕ್ಷಿದಾರರಿಗೆ ನೆಮ್ಮದಿ ತರಲಿದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.

ಕರ್ನಾಟಕ ಉಚ್ಛ ನ್ಯಾಯಾಲಯ ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಅವರು ಮಾತಾನಾಡಿ ಭಾರತದ ನ್ಯಾಯಾಲಯ ವ್ಯವಸ್ಥೆ ಅತ್ಯಂತ ಸುಭದ್ರವಾಗಿದ್ದು, ಕೋವಿಡ್-19 ಸಮಯದಲ್ಲಿ ಸಹ ಆನ್‍ಲೈನ್ ಮೂಲಕ ವ್ಯಾಜ್ಯ ಪ್ರಕರಣಗಳನ್ನು ನಡೆಸಲಾಯಿತು, ಕರ್ನಾಟಕದ ಹಲವೆಡೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಶಾಖಾ ಕಚೇರಿಗಳನ್ನು ತೆರೆದು ಸಾರ್ವಜನಿಕರಿಗೆ ಶೀಘ್ರದಲ್ಲಿ ನ್ಯಾಯ ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ತಿಳಿಸಿದರು.

ಭಾರತದ ಸವೋಚ್ಛನ್ಯಾಯಾಲಯದ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರು ಮಾತನಾಡಿ ವಾಣಿಜ್ಯ ವ್ಯಾಜ್ಯಗಳಿಗಾಗಿ ಪ್ರತ್ಯೇಕ ನ್ಯಾಯಲಯ ಸ್ಥಾಪಿಸವುದುರ ಮೂಲಕ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ನೂತನ ಪರ್ವವೊಂದು ಆರಂಭ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

CM laid foundation for Bengaluru Mediation Centre 2

ಇಂದಿನ ತಂತ್ರಜ್ಞಾನದ ವ್ಯವಸ್ಥೆ ನ್ಯಾಯಾಲಯ ಬಳಸಿಕೊಳ್ಳುತ್ತಿದ್ದು, ವ್ಯಾಜ್ಯಗಳ ತ್ವರಿತ ವಿಲೇವಾರಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಇಂದಿನ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹೊರ ತಂದಿರುವ ಥೀಮ್ ಸಾಂಗ್ ಅತ್ಯಂತ ಇಂಪಾಗಿದ್ದು ಅರ್ಥಗರ್ಭಿತವಾಗಿದೆ ಎಂದು ಹರ್ಷವ್ಯಕ್ತಪಡಿಸಿದರು.

ಸವೋಚ್ಛ ನ್ಯಾಯಾಲಯದ ಮತ್ತೊಬ್ಬ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರು ಮಾತಾನಡಿ ಇದೊಂದು ಹೈಬ್ರಿಡ್ ಕಾಲವಾಗಿದ್ದು, ಇಂದಿನ ಕಾರ್ಯಕ್ರಮ ಸಹ ಒಂದು ರೀತಿಯಲ್ಲಿ ಹೈಬ್ರಿಡ್ ಕಾರ್ಯಕ್ರಮವಾಗಿದೆ, ನ್ಯಾಯಮೂರ್ತಿಗಳಾದ ಮೋಹನ್ ಎಮ್ ಶಾಂತನಗೌಡ ಅವರು ದೆಹಲಿಯಲ್ಲಿ ಕುಳಿತು ಇಂದಿನ ಕಾರ್ಯಕ್ರಮಕ್ಕೆ ಇ-ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದ್ದು ವಿಶೇಷವಾಗಿತ್ತು ಎಂದು ಹೇಳಿದರು.

ಇಂದಿನ ಕಾರ್ಯಕ್ರಮದಲ್ಲಿ ಎರಡು ನೂತನ ಕಟ್ಟಡಗಳಿಗೆ ಶಿಲನ್ಯಾಸ ಹಾಗೂ ಮೂರು ನೂತನ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹೊರ ತಂದಿರುವ ಗೀತೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಗೋವಿಂದ್ ಎಮ್ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ನ್ಯಾಯಮೂರ್ತಿಗಳಾದ ಶ್ರೀಮತಿ ಬಿ.ವಿ.ನಾಗರತ್ನ, ಭಾರತ ಸರ್ಕಾರದ ಸಾಲಿಸಿಟರ್ ಜನರಲ್ ಎಮ್.ಬಿ.ನರಗುಂದ, ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಅಧ್ಯಕ್ಷ ಶ್ರೀನಿವಾಸ ಬಾಬು ಸೇರಿದಂತೆ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ನ್ಯಾಯಮೂರ್ತಿ ಸತೀಶ್‍ಚಂದ್ರ ಶೆಟ್ಟಿ ಅವರು ಸ್ವಾಗತ ಕೋರಿದರು ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರು ವಂದಿಸಿದರು.

LEAVE A REPLY

Please enter your comment!
Please enter your name here