Pakistan vs England, 1st Test: ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನ್-ಇಂಗ್ಲೆಂಡ್ (PAK vs ENG) ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ರನ್ಗಳ ಸುರಿಮಳೆಯಾಗಿದೆ. ಮೊದಲ ಇನಿಂಗ್ಸ್ನಲ್ಲಿ ಬ್ಯಾಟ್ ಬೀಸಿದ ಇಂಗ್ಲೆಂಡ್ ತಂಡವು 4 ಶತಕದೊಂದಿಗೆ 657 ರನ್ ಕಲೆಹಾಕಿತು. ಇದಕ್ಕುತ್ತರವಾಗಿ 2ನೇ ದಿನದಾಟದಲ್ಲಿ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಅದರಲ್ಲೂ ಪಾಕ್ ತಂಡ ಮೂವರು ಬ್ಯಾಟರ್ಗಳು ಶತಕ ಸಿಡಿಸಿ ಬ್ಯಾಟ್ ಮೇಲೆತ್ತಿದ್ದಾರೆ. 657 ರನ್ಗಳ ಗುರಿಯೊಂದಿಗೆ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ತಂಡಕ್ಕೆ ಅಬ್ದುಲ್ಲಾ ಶಫೀಕ್ ಹಾಗೂ ಇಮಾಮ್-ಉಲ್-ಹಕ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 225 ರನ್ಗಳ ಜೊತೆಯಾಟವಾಡಿದ ಈ ಜೋಡಿ ಶತಕ ಸಿಡಿಸಿ ಮಿಂಚಿದರು. 203 ಎಸೆತಗಳನ್ನು ಎದುರಿಸಿದ ಶಫೀಕ್ 114 ರನ್ ಬಾರಿಸಿ ವಿಲ್ ಜ್ಯಾಕ್ಸ್ಗೆ ವಿಕೆಟ್ ಒಪ್ಪಿಸಿದರೆ, ಇಮಾಮ್-ಉಲ್-ಹಕ್ 207 ಎಸೆತಗಳಲ್ಲಿ 121 ರನ್ಗಳಿಸಿ ಜ್ಯಾಕ್ ಲೀಚ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಆ ಬಳಿಕ ಬಂದ ಅಜರ್ ಅಲಿ (27) ಬೇಗನೆ ಔಟಾದರೂ, ನಾಯಕ ಬಾಬರ್ ಆಜಂ ಬಿರುಸಿನ ಇನಿಂಗ್ಸ್ ಆಡಿದರು.
ಅದರಂತೆ 168 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 19 ಫೋರ್ನೊಂದಿಗೆ 136 ರನ್ ಕಲೆಹಾಕಿದ ಬಾಬರ್ ಆಜಂ ಈ ಪಂದ್ಯದಲ್ಲಿ ಶತಕಗಳಿಸಿದ 7ನೇ ಬ್ಯಾಟ್ಸ್ಮನ್ ಎನಿಸಿಕೊಂಡರು. ಇನ್ನು ಶತಕದ ಬಳಿಕ ವಿಲ್ ಜ್ಯಾಕ್ ಎಸೆತದಲ್ಲಿ ಔಟಾಗುವ ಮೂಲಕ ಬಾಬರ್ ಆಜಂ ಪೆವಿಲಿಯನ್ ಸೇರಿದ್ದಾರೆ. ಮೂರನೇ ದಿನದಾಟದ ಅಂತ್ಯಕ್ಕೆ ಪಾಕಿಸ್ತಾನ್ ತಂಡವು 7 ವಿಕೆಟ್ ನಷ್ಟಕ್ಕೆ 499 ರನ್ ಕಲೆಹಾಕಿದೆ. ಅಂದರೆ ಮೊದಲ ಇನಿಂಗ್ಸ್ಗಳ ಮೂಲಕ ಉಭಯ ತಂಡಗಳು ಸೇರಿ ಈಗಾಗಲೇ 1156 ರನ್ ಕಲೆಹಾಕಿದ್ದಾರೆ. ಇತ್ತ ವಿಕೆಟ್ ಪಡೆಯಲು ಹರಸಾಹಸ ಪಡುತ್ತಿರುವ ಬೌಲರ್ಗಳು ರನ್ ಸುರಿಮಳೆಯೊಂದಿಗೆ ಹೈರಾಣರಾಗಿದ್ದಾರೆ.
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಂಗ್ಲ ಪಡೆಯ ನಾಯಕ ಬೆನ್ ಸ್ಟೋಕ್ಸ್ (Ben Stokes) ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಪಾಕ್ ಬೌಲರ್ಗಳಿಗೆ ಬಾಝ್ ಬಾಲ್ ಅಬ್ಬರ ಹೇಗಿರುತ್ತೆ ಎಂಬುದನ್ನು ತೋರಿಸಿಕೊಟ್ಟಿದ್ದರು. ಮೊದಲ ಓವರ್ನಲ್ಲೇ 14 ರನ್ ಬಾರಿಸುವ ಮೂಲಕ ಭರ್ಜರಿಯಾಗಿ ಇನಿಂಗ್ಸ್ ಆರಂಭಿಸಿದ ಝ್ಯಾಕ್ ಕ್ರಾಲಿ ಹಾಗೂ ಬೆನ್ ಡಕೆಟ್ ಮೊದಲ ವಿಕೆಟ್ಗೆ 233 ರನ್ಗಳ ಜೊತೆಯಾಟವಾಡಿದರು. ಅದು ಕೂಡ ಕೇವಲ 35.4 ಓವರ್ಗಳಲ್ಲಿ ಎಂಬುದು ವಿಶೇಷ. ಈ ಭರ್ಜರಿ ಜೊತೆಯಾಟದಲ್ಲಿ ಝ್ಯಾಕ್ ಕ್ರಾಲಿ 111 ಎಸೆತಗಳಲ್ಲಿ 21 ಫೋರ್ನೊಂದಿಗೆ 122 ರನ್ ಬಾರಿಸಿದರು. ಮತ್ತೊಂದೆಡೆ ಬೆನ್ ಡಕೆಟ್ 110 ಎಸೆತಗಳಲ್ಲಿ 15 ಫೋರ್ನೊಂದಿಗೆ 107 ರನ್ಗಳ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು.
ಈ ಹಂತದಲ್ಲಿ ಝಾಹಿದ್ ಮೆಹಮೂದ್ ಎಸೆತದಲ್ಲಿ ಕ್ರಾಲಿ (107) ಔಟಾದರೆ, ಇದರ ಬೆನ್ನಲ್ಲೇ ಹ್ಯಾರಿಸ್ ರೌಫ್ ಎಸೆತದಲ್ಲಿ ಡಕೆಟ್ (122) ಕೂಡ ವಿಕೆಟ್ ಒಪ್ಪಿಸಿದರು. ಈ ವೇಳೆ ಜೊತೆಯಾದ ಒಲಿ ಪೋಪ್ ಹಾಗೂ ಜೋ ರೂಟ್ ಕೂಡ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದರು. ಆದರೆ 23 ರನ್ಗಳಿಸಿದ್ದ ರೂಟ್ ಝಾಹಿದ್ ಮೆಹಮೂದ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದರು.
ಆ ನಂತರ ಶುರುವಾಗಿದ್ದು ಪೋಪ್ ಹಾಗೂ ಹ್ಯಾರಿ ಬ್ರೂಕ್ ಅಬ್ಬರ. ಟೆಸ್ಟ್ ಕ್ರಿಕೆಟ್ನಲ್ಲಿ ಏಕದಿನ ಇನಿಂಗ್ಸ್ ಆಡಿದ ಈ ಜೋಡಿ ಪಾಕಿಸ್ತಾನದ ಪ್ರಮುಖ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ 104 ಎಸೆತಗಳಲ್ಲಿ 14 ಫೋರ್ನೊಂದಿಗೆ ಒಲಿ ಪೋಪ್ 108 ರನ್ ಬಾರಿಸಿದರು. ಇದೇ ವೇಳೆ ಅಲಿ ಎಸೆತವನ್ನು ಗುರುತಿಸುವಲ್ಲಿ ಎಡವಿದ ಪೋಪ್ ಎಲ್ಬಿ ಆಗಿ ನಿರ್ಗಮಿಸಿದರು. ಆದರೆ ಮತ್ತೊಂದೆಡೆ ಸಿಡಿಲಬ್ಬರ ಮುಂದುವರೆಸಿದ್ದ ಯುವ ಬ್ಯಾಟರ್ ಹ್ಯಾರಿ ಬ್ರೂಕ್ ಸೌದ್ ಶಕೀಲ್ ಎಸೆದ 68ನೇ ಓವರ್ನ 6 ಎಸೆತಗಳಲ್ಲೂ ಭರ್ಜರಿ ಬೌಂಡರಿ ಬಾರಿಸಿದರು.
ಅಷ್ಟೇ ಅಲ್ಲದೆ ಕೇವಲ 80 ಎಸೆತಗಳಲ್ಲಿ 14 ಫೋರ್, 2 ಸಿಕ್ಸ್ನೊಂದಿಗೆ ಚೊಚ್ಚಲ ಶತಕ ಪೂರೈಸುವ ಮೂಲಕ ಬ್ಯಾಟ್ ಮೇಲೆಕ್ಕೆತ್ತಿದ್ದರು. ಇನ್ನು ಶತಕದ ಬಳಿಕ ಸಿಡಿಲಬ್ಬರ ಮುಂದುವರೆಸಿದ ಬ್ರೂಕ್ ಅಂತಿಮವಾಗಿ 116 ಎಸೆತಗಳಲ್ಲಿ 19 ಫೋರ್ ಹಾಗೂ 5 ಸಿಕ್ಸ್ನೊಂದಿಗೆ 153 ರನ್ ಕಲೆಹಾಕಿ ನಸೀಮ್ ಶಾ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಬ್ರೂಕ್ ವಿಕೆಟ್ ಬೀಳುತ್ತಿದ್ದಂತೆ ಮೇಲುಗೈ ಸಾಧಿಸಿದ ಪಾಕ್ ಬೌಲರ್ಗಳು ಅಂತಿಮವಾಗಿ ಇಂಗ್ಲೆಂಡ್ ತಂಡವನ್ನು 657 ರನ್ಗಳಿಗೆ ಆಲೌಟ್ ಮಾಡಿತು.
ಇದೀಗ ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ನಲ್ಲಿ ಪಾಕಿಸ್ತಾನದ ಮೂವರು ಬ್ಯಾಟ್ಸ್ಮನ್ಗಳು ಶತಕ ಸಿಡಿಸಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಈ ಮೂಲಕ 3ನೇ ದಿನದಾಟದವರೆಗೆ ಹಿಡಿತ ಸಾಧಿಸುವಲ್ಲಿ ಬಾಬರ್ ಪಡೆ ಯಶಸ್ವಿಯಾಗಿದೆ. ಸದ್ಯ 158 ರನ್ಗಳ ಹಿನ್ನಡೆ ಹೊಂದಿರುವ ಪಾಕ್ ಪರ ಅಘಾ ಸಲ್ಮಾನ್ ಹಾಗೂ ಝಾಹಿದ್ ಮೆಹಮೂದ್ 4ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಪಾಕಿಸ್ತಾನ್-ಇಂಗ್ಲೆಂಡ್ ಪ್ರಥಮ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ಶತಕ ಸಿಡಿಸಿದವರು:
ಇಂಗ್ಲೆಂಡ್ ಬ್ಯಾಟರ್ಗಳು:-
ಝ್ಯಾಕ್ ಕ್ರಾವ್ಲೆ- 122 ರನ್ (111 ಎಸೆತ)
ಬೆನ್ ಡಕೆಟ್- 107 ರನ್ (110 ಎಸೆತ)
ಒಲಿ ಪೋಪ್- 108 ರನ್ (104 ಎಸೆತ)
ಹ್ಯಾರಿ ಬ್ರೂಕ್- 153 ರನ್ (116 ಎಸೆತ)
ಪಾಕಿಸ್ತಾನ್ ಬ್ಯಾಟರ್ಗಳು:-
ಅಬ್ದುಲ್ಲಾ ಶಫೀಕ್- 114 ರನ್ (203 ಎಸೆತ)
ಇಮಾಮ್ ಉಲ್ ಹಕ್- 121 (207 ಎಸೆತ)
ಬಾಬರ್ ಆಜಂ- 136 ರನ್ (168 ಎಸೆತ)