ಡಲ್ಲಾಸ್: ಅಮೇರಿಕಾ ವಿರುದ್ಧ ಪಾಕಿಸ್ತಾನಕ್ಕೆ ಸೋಲು ಕಂಡಿದೆ. ಡಲ್ಲಾಸ್ ನಲ್ಲಿ ನಡೆದ ಅಮೇರಿಕಾ-ಪಾಕ್ ನಡುವಿನ ಟಿ20 ವಿಶ್ವಕಪ್ ಪಂದ್ಯ ಆರಂಭದಲ್ಲಿ ಸಮಬಲ ಕಂಡು ಸೂಪರ್ ಓವರ್ ನಲ್ಲಿ ಕೊನೆಗೊಂಡಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಅಮೇರಿಕಾ ತಂಡ, ಪಾಕಿಸ್ತಾನ ತಂಡವನ್ನು ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಗೆ ಕಟ್ಟಿಹಾಕಿತು. ಅಮೇರಿಕಾ ಪರ ನೋಸ್ತೂಶ್ ಕೆಂಜಿಗೆ 30 ರನ್ ನೀಡಿ 3 ವಿಕೆಟ್ ಪಡೆದರೆ, ಸೌರಭ್ ನೇತ್ರವಲ್ಕರ್ 18 ರನ್ ನೀಡಿ 2 ವಿಕೆಟ್ ಪಡೆದರು, ಅಲಿಖಾನ್ 30 ರನ್, ಜಸ್ದೀಪ್ ಸಿಂಗ್ 37 ರನ್ ನೀಡಿ ತಲಾ 1 ವಿಕೆಟ್ ಪಡೆದರು.
ಪಾಕ್ ಪರ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ 8 ಎಸೆತಗಳನ್ನು ಎದುರಿಸಿ 9 ರನ್ ಗಳಿಸಿ ಬೇಗ ಔಟ್ ಆದರೆ, ಬಾಬರ್ ಆಜಮ್ 43 ಎಸೆತಗಳಲ್ಲಿ 44 ರನ್ ಗಳಿಸಿದರೆ, ಶಾದಬ್ ಖಾನ್ 25 ಎಸೆತಗಳಲ್ಲಿ 40 ರನ್ ಗಳಿಸಿದರು.
160 ರನ್ ಗಳ ಟಾರ್ಗೆಟ್ ಚೇಸಿಂಗ್ ನಲ್ಲಿ ಅಮೇರಿಕ ತಂಡದ ಬ್ಯಾಟ್ಸ್ಮನ್ ಗಳು ಪಾಕ್ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದರು. ಆರಂಭದಲ್ಲಿ ಸ್ಟೀವನ್ ಟೇಲರ್ (16 ಎಸೆತಗಳಲ್ಲಿ 12 ರನ್) ವಿಕೆಟ್ ಕಳೆದುಕೊಂಡು ಅಮೇರಿಕ ಅಘಾತ ಎದುರಿಸಿತಾದರೂ, ಮೊನಾಂಕ್ ಪಟೇಲ್ (38 ಎಸೆತಗಳಲ್ಲಿ 50 ರನ್) ಗಳಿಸಿ ತಂಡ ಗುರಿ ತಲುಪಲು ನೆರವಾದರು. ಆಂಡ್ರೀಸ್ ಗೌಸ್ ಆರನ್ ಜೋನ್ಸ್ ತಲಾ 36 ರನ್ ಗಳಿಸಿದರು.
ಅಂತಿಮವಾಗಿ ಅಮೇರಿಕಾ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತು. ಅಂತಿಮವಾಗಿ ಸೂಪರ್ ಓವರ್ ನಲ್ಲಿ ಅಮೇರಿಕಾ ಪಾಕ್ ಗೆ 19 ರನ್ ಗಳ ಗುರಿ ನೀಡಿತು. ಆದರೆ ಪಾಕ್ 13 ರನ್ ಗಳನ್ನಷ್ಟೇ ಗಳಿಸಿ ಸೋಲೊಪ್ಪಿಕೊಂಡಿತು.