ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಭದ್ರತಾ ಲೋಪದ ಮತ್ತೊಂದು ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಜೈಲಿನೊಳಗೆ ಡ್ರಗ್ಸ್ ಮತ್ತು ಸಿಮ್ ಕಾರ್ಡ್ ಸಾಗಣೆ ಮಾಡಲು ಯತ್ನಿಸಿದ್ದ ಆರೋಪದಲ್ಲಿ 27 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತೆಯನ್ನು ರಿತಿಕಾ ರಾಯ್ ಎಂದು ಗುರುತಿಸಲಾಗಿದ್ದು, ಕೈದಿಯನ್ನು ಭೇಟಿ ಮಾಡುವ ನೆಪದಲ್ಲಿ ಜೈಲಿಗೆ ಬಂದಿದ್ದಳು.
ಮಾರ್ಚ್ 26ರಂದು ಸಂಜೆ ಸುಮಾರು 4:30ರ ವೇಳೆಗೆ ರಿತಿಕಾ ಜೈಲಿಗೆ ಬಂದು ವಿಸಿಟರ್ಸ್ ಪಾಸ್ ಪಡೆದು, ವಿಚಾರಣಾ ದಿನ ಕೈದಿಯಾಗಿರುವ ಫರಾನ್ ಖಾನ್ ಅವರನ್ನು ಭೇಟಿಯಾಗಲು ಯತ್ನಿಸಿದ್ದಳು. ಆದರೆ ಜೈಲಿನ ಮುಖ್ಯ ಗೇಟ್ ಬಳಿ ಅವಳ ನಡೆ-ನುಡಿಗಳು ಅನುಮಾನಾಸ್ಪದವಾಗಿ ಕಂಡುಬಂದ ಕಾರಣ ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದರು.
ಮಹಿಳಾ ಭದ್ರತಾ ಸಿಬ್ಬಂದಿ ನಡೆಸಿದ ದೇಹ ತಪಾಸಣೆಯಲ್ಲಿ, ಅವಳಿಂದ ಮೂರು ಸಿಮ್ ಕಾರ್ಡ್ಗಳು ಮತ್ತು ಸುಮಾರು 30 ಗ್ರಾಂ ಗಾಂಜಾ ಪತ್ತೆಯಾಗಿದೆ. ಈ ವಸ್ತುಗಳನ್ನು ಅವಳು ತನ್ನ ಉಡುಪಿನೊಳಗೆ ಬಚ್ಚಿಟ್ಟಿದ್ದಳು ಎನ್ನಲಾಗಿದೆ.
ತಕ್ಷಣವೇ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಬಂದು ಆರೋಪಿಯನ್ನು ಬಂಧಿಸಿ ಎಫ್ಐಆರ್ ದಾಖಲಿಸಿದ್ದಾರೆ.
ಈ ಪ್ರಕರಣ ಜೈಲಿನೊಳಗೆ ಮೊಬೈಲ್ ಫೋನ್, ಸಿಮ್ ಕಾರ್ಡ್ ಹಾಗೂ ಡ್ರಗ್ಸ್ ಬಳಕೆ ನಡೆಯುತ್ತಿರುವ ಆರೋಪಗಳಿಗೆ ಮತ್ತೊಮ್ಮೆ ಬಲ ನೀಡಿದೆ. ಈ ಅಕ್ರಮ ವಸ್ತುಗಳು ಹೊರಗಿನಿಂದಲೇ ಪೂರೈಕೆಯಾಗುತ್ತಿವೆ ಎಂಬ ಶಂಕೆ ವ್ಯಕ್ತವಾಗಿದ್ದು, ಭೇಟಿ ನೀಡುವವರು ಅಥವಾ ಕೆಲ ಭ್ರಷ್ಟ ಸಿಬ್ಬಂದಿಗಳ ಮೂಲಕ ಸಾಗಣೆ ನಡೆಯುವ ಸಾಧ್ಯತೆಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಪ್ರಸ್ತುತ, ರಿತಿಕಾ ರಾಯ್ ಕೇವಲ ಫರಾನ್ ಖಾನ್ಗೆ ಮಾತ್ರ ಪೂರೈಕೆ ಮಾಡುತ್ತಿದ್ದಳಾ ಅಥವಾ ಇನ್ನಷ್ಟು ಕೈದಿಗಳಿಗೆ ಸಂಪರ್ಕ ಹೊಂದಿದ್ದಳಾ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.
ಒಟ್ಟಾರೆ, ಈ ಘಟನೆ ಜೈಲು ಭದ್ರತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದ್ದು, ಅಕ್ರಮ ಸಾಗಣೆ ಜಾಲವನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.
