ಬೆಂಗಳೂರು, ಸೆಪ್ಟೆಂಬರ್ 10: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಸಂಡಲ್‌ವುಡ್ ನಟ ದರ್ಶನ್ ಅವರಿಗೆ ಕೊನೆಗೂ ಹಾಸಿಗೆ, ದಿಂಬು ಮತ್ತು ಬೆಡ್‌ಶೀಟ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ದರ್ಶನ್ ಜೈಲಿನಲ್ಲಿನ ಅಸೌಕರ್ಯದ ಬಗ್ಗೆ ನ್ಯಾಯಾಲಯದಲ್ಲಿ ಮನವಿ ಮಾಡಿದ ನಂತರ ಕೋರ್ಟ್ ಈ ಕುರಿತು ಆದೇಶ ನೀಡಿತ್ತು.
ಕೋರ್ಟ್‌ನಲ್ಲಿ ದರ್ಶನ್ ಅಳಲು
ಮಂಗಳವಾರ ನಡೆದ ವಿಚಾರಣೆಯಲ್ಲಿ ದರ್ಶನ್ ತಮ್ಮ ಸೆಲ್‌ನಲ್ಲಿ ಹಾಸಿಗೆ ಮತ್ತು ದಿಂಬು ಇಲ್ಲದಿರುವುದು, ಸೊಳ್ಳೆ ಕಾಟ, ಅಸ್ವಚ್ಛ ಪರಿಸ್ಥಿತಿಗಳಿಂದ ತೀವ್ರ ತೊಂದರೆ ಅನುಭವಿಸುತ್ತಿರುವುದಾಗಿ ಕೋರ್ಟ್ ಮುಂದೆ ಅಳಲನ್ನೂ ತೋಡಿಕೊಂಡಿದ್ದರು. “ಇಲ್ಲಿ ಇರುವುದು ಅಸಾಧ್ಯ, ಸ್ವಲ್ಪ ವಿಷವನ್ನಾದರೂ ಕೊಡಿ” ಎಂದು ಅವರು ಮನವಿ ಮಾಡಿದ ಬಗ್ಗೆ ವರದಿಯಾಗಿದೆ.
ಸೌಲಭ್ಯ ಒದಗಿಸಿದ ಜೈಲು ಅಧಿಕಾರಿಗಳು
ನ್ಯಾಯಾಲಯದ ಸೂಚನೆಯಂತೆ ಮಂಗಳವಾರದಿಂದಲೇ ಜೈಲು ಅಧಿಕಾರಿಗಳು ದರ್ಶನ್‌ಗೆ ಹಾಸಿಗೆ, ದಿಂಬು, ಬೆಡ್‌ಶೀಟ್ ಒದಗಿಸಿದ್ದು, ತಮ್ಮ ಸೆಲ್ ಮುಂದೆ ನಡೆಯಲು ಅವಕಾಶ ನೀಡಿದ್ದಾರೆ. ಜೊತೆಗೆ ಮಂಗಳವಾರ ರಾತ್ರಿ ಜೈಲು ವೈದ್ಯರು ಅವರ ಆರೋಗ್ಯ ಪರಿಶೀಲನೆ ನಡೆಸಿದ್ದಾರೆ.
ಬಳ್ಳಾರಿ ಜೈಲು ವರ್ಗಾವಣೆ ಅರ್ಜಿ ತಿರಸ್ಕಾರ
ದರ್ಶನ್ ಮತ್ತು ಅವರ ಸಹಚರರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸುವಂತೆ ಜೈಲು ಆಡಳಿತ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಇದರಿಂದ ದರ್ಶನ್‌ಗೆ ದೊಡ್ಡ ಮಟ್ಟದ ನಿಟ್ಟುಸಿರು ಸಿಕ್ಕಿದೆ.
ಈ ನಡುವೆ, ಅವರನ್ನು ಪ್ರಸ್ತುತ ಸೆಲ್‌ನಿಂದ ಸೆಕ್ಯೂರಿಟಿ ಬ್ಯಾರಕ್‌ಗೆ ಸ್ಥಳಾಂತರಿಸುವ ಕುರಿತು ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ. ಪ್ರಸ್ತುತ ತರಬೇತಿಗಾಗಿ ಹೈದರಾಬಾದ್‌ನಲ್ಲಿ ಇರುವ ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕರು ಶನಿವಾರ ಹಿಂದಿರುಗುವ ನಿರೀಕ್ಷೆಯಿದ್ದು, ನಂತರ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗಲಿದೆ.