ಮುಂಗಾರು ಆರಂಭವಾಗಿದೆ. ಈ ಹಂತದಲ್ಲಿ ಕಾಣು ಮೆಣಸು ಬೆಳೆಯಲ್ಲಿ ಹಲವು ರೋಗಗಳು, ಕಿಟ ಬಾಧೆ ಕಾಣಿಸಿಕೊಳ್ಳುತ್ತದೆ. ಅಂಥ ರೋಗ ಬಾಧೆಗಳಿಂದ ಕಾಳು ಮೆಣಸು ಬೆಳೆ ರಕ್ಷಣೆ ಮಾಡುವುದು ಹೇಗೆ ಎನ್ನುವ ಬಗ್ಗೆ ಇಲ್ಲಿದೆ ನೋಡಿ!
ಕಾಳು ಮೆಣಸು ಚಿಬ್ಬು ರೋಗವನ್ನು ಹತೋಟಿ ಮಾಡಲು ಕಾರ್ಬೆಂಡೆಜಿಮ್ + ಮ್ಯಾಂಕೋಜೆಬ್ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು. ರೋಗ ಬಾಧೆಯಿಂದ ಬಳಲಿ ಸತ್ತು ಹೋದ ಬಳ್ಳಿಗಳನ್ನು ಬೇರು ಸಮೇತ ಕಿತ್ತು ತೋಟದಿಂದ ಹೊರಗೊಯ್ದು ನಾಶಪಡಿಸಬೇಕು.
ಪ್ರತೀ ಬಳ್ಳಿಗೆ 50 ರಿಂದ 60 ಗ್ರಾಂ ಟ್ರೈಕೋಡರ್ಮ ಎಂಬ ಜೈವಿಕ ಶಿಲೀಂದ್ರವನ್ನು 1 ಕೆ.ಜಿ ಬೇವಿನ ಹಿಂಡಿ ಅಥವಾ 5 ಕೆ.ಜಿ ಕೊಟ್ಟಿಗೆ ಗೊಬ್ಬರದಲ್ಲಿ ಮಿಶ್ರಣ ಮಾಡಿ ಬುಡಕ್ಕೆ ಹಾಕಬೇಕು. ಅಥವಾ 4 ಕೆ.ಜಿ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹ ಮತ್ತು ಒಂದು ಕೆ.ಜಿ ಬೆಲ್ಲವನ್ನು 200 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಗಿಡದ ಬುಡ ಭಾಗಕ್ಕೆ ನೇರವಾಗಿ (4 ರಿಂದ 5 ಲೀಟರ್‍ನಷ್ಟು) ಸುರಿಯಬೇಕು.
ನೆಲದ ಮೇಲೆ ಹರಡಿರುವ ಹಾಗೂ ಹೆಚ್ಚಾದ ಕವಲು ಬಳ್ಳಿಗಳನ್ನು ಮುಂಗಾರಿಗೆ ಮುನ್ನ ಕತ್ತರಿಸಿ ತೆಗೆಯಬೇಕು. ಉಳಿದ ಬಳ್ಳಿಗಳನ್ನು ಆಶ್ರಯ ಮರಕ್ಕೆ ಕಟ್ಟಿ ಬೆಳೆಯಲು ಬಿಡಬೇಕು. ಕತ್ತರಿಸಿದ ಭಾಗಕ್ಕೆ ಕಾಪರ್ ಆಕ್ಸಿಕ್ಲೋರೈಡ್ ಪೇಸ್ಟನಿಂದ ಲೇಪನ ಮಾಡಬೇಕು.
ಶಿಫಾರಸ್ಸು ಮಾಡಿದ ಪ್ರಮಾಣದ ರಸಗೊಬ್ಬರವನ್ನು ಮಾತ್ರ ಕೊಡಬೇಕು. ಪ್ರತಿ ಗಿಡಕ್ಕೆ 300 ಗ್ರಾಂ ಯೂರಿಯಾ, 275 ಗ್ರಾಂ ಶಿಲಾರಂಜಕ ಮತ್ತು 450 ಗ್ರಾಂ ಎಂ.ಓ.ಪಿನ್ನು ಕೊಡಬೇಕು. ಮೇಲೆ ತಿಳಿಸಿರುವ ಪ್ರಮಾಣದ ಗೊಬ್ಬರವು ಒಂದು ಬಳ್ಳಿಗೆ ಒಂದು ವರ್ಷಕ್ಕೆ ಕೊಡಬೇಕಾದ ಪ್ರಮಾಣವಾಗಿದ್ದು ಮೊದಲನೆ ಕಂತನ್ನು ಜೂನ್ ತಿಂಗಳಿನಲ್ಲಿ ಎರಡನೆ ಕಂತಿನ ಗೊಬ್ಬರವನ್ನು ಆಗಸ್ಟ್ ತಿಂಗಳಿನಲ್ಲಿ ಕೊಡಬೇಕು.
ಕಾಫಿ ಮತ್ತು ಅಡಿಕೆ ತೋಟಗಳಲ್ಲಿ ಒಂದಕ್ಕಿಂತ ಹೆಚ್ಚು ತಳಿಗಳಿರುವಂತೆ ಕಾಳುಮೆಣಸು ಬಳ್ಳಿಗಳನ್ನು ನಾಟಿ ಮಾಡಬೇಕು. ಬಳ್ಳಿಯ ಗಾತ್ರ ಹೆಚ್ಚಿಸಲು 5-8 ಬಳ್ಳಿಗಳನ್ನು ನಾಟಿಮಾಡುವುದು. ಜಂತುಹುಳುಗಳ ಬಾಧೆಯನ್ನು ತಪ್ಪಿಸಲು (ನಿಧಾನ ಸೊರಗು ರೋಗ) ಮಳೆಗಾಲ ಪ್ರಾರಂಭವಾಗುವುದಕ್ಕಿಂತ ಮುಂಚೆ ಪ್ರತೀ ಬಳ್ಳಿಗೆ 1 ಕಿ. ಗ್ರಾಂ ಬೇವಿನ ಹಿಂಡಿ ಗಿಡದ ಬುಡಕ್ಕೆ ಹಾಕಬೇಕು.
The post Pepper Crop: ಮಳೆಗಾಲದಲ್ಲಿ ಕಾಳು ಮೆಣಸಿನ ರಕ್ಷಣೆ ಹೇಗೆ ಮಾಡೋದು ಗೊತ್ತಾ?! appeared first on Ain Live News.