ಬೆಂಗಳೂರು, ಮಾರ್ಚ್ 25: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯಾಗಿದೆ ಎಂಬ ಸುಳ್ಳು ವದಂತಿಗಳು ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ವದಂತಿಗಳಿಂದ ಸಾರ್ವಜನಿಕರು ಆತಂಕಕ್ಕೊಳಗಾಗಿ ಪೆಟ್ರೋಲ್ ಬಂಕ್ಗಳಲ್ಲಿ ಬಾಟಲಿ ಹಾಗೂ ಕ್ಯಾನ್ಗಳೊಂದಿಗೆ ಸರತಿ ಸಾಲಿನಲ್ಲಿ ನಿಂತು ಇಂಧನ ಸಂಗ್ರಹಿಸುತ್ತಿರುವುದು ಕಂಡುಬಂದಿದೆ. ಈ ಕುರಿತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಸ್ಪಷ್ಟೀಕರಣ ನೀಡಿದೆ.
“ಸಾಕಷ್ಟು ದಾಸ್ತಾನು ಲಭ್ಯವಿದೆ. ಕೇಂದ್ರ ಸರ್ಕಾರದಿಂದ ಚಿಲ್ಲರೆ ಮಾರಾಟ ಮಳಿಗೆಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಸುಗಮವಾಗಿ ನಡೆಯುತ್ತಿದೆ. ಯಾವುದೇ ರೀತಿಯ ಕೊರತೆಯು ಉಂಟಾಗಿಲ್ಲ” ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇಂಧನ ಕೊರತೆಯ ಬಗ್ಗೆ ಹರಡುತ್ತಿರುವ ಸುದ್ದಿಗಳು ಕೇವಲ ವದಂತಿಗಳಾಗಿದ್ದು, ಸಾರ್ವಜನಿಕರು ಅನಗತ್ಯವಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಚಿಲ್ಲರೆ ಮಾರಾಟ ಮಳಿಗೆಗಳು ವಾಹನಗಳ ಇಂಧನ ಟ್ಯಾಂಕ್ಗಳಿಗೆ ಮಾತ್ರ ನೇರವಾಗಿ ಇಂಧನವನ್ನು ಪೂರೈಸುತ್ತವೆ. ಯಾವುದೇ ರೀತಿಯ ಕ್ಯಾನ್ ಅಥವಾ ಬಾಟಲಿಯಲ್ಲಿ ಇಂಧನ ಪೂರೈಸಲು ಅವಕಾಶವಿಲ್ಲ. ಪ್ರತ್ಯೇಕ ಕಂಟೈನರ್ಗಳಲ್ಲಿ ಇಂಧನ ಸಂಗ್ರಹಿಸುವುದು ಅಪಾಯಕಾರಿ ಹಾಗೂ ಕಾನೂನುಬಾಹಿರವಾಗಿದೆ.
ಇಂಧನವನ್ನು ಕೇವಲ ವಾಹನಗಳ ಟ್ಯಾಂಕ್ಗಳಿಗೆ ಮಾತ್ರ ಭರ್ತಿ ಮಾಡಬೇಕು. ಬಾಟಲಿ ಅಥವಾ ಪ್ರತ್ಯೇಕ ಕಂಟೈನರ್ಗಳಲ್ಲಿ ಇಂಧನ ನೀಡದಂತೆ ಪೆಟ್ರೋಲ್ ಬಂಕ್ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಸಾರ್ವಜನಿಕರು ಸಹಕರಿಸಿ, ಅಗತ್ಯಕ್ಕಿಂತ ಹೆಚ್ಚಿನ ಇಂಧನವನ್ನು ಸಂಗ್ರಹಿಸಿ ಆತಂಕ ಸೃಷ್ಟಿಸಬಾರದೆಂದು ಈ ಮೂಲಕ ವಿನಂತಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಾಗರಾಜ್ ಬಿ.ಇ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
