ಬೆಂಗಳೂರು, ಮೇ 7: ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಸೇರಿದಂತೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ಮತ ಚಲಾಯಿಸಿದರು. ಕಲಬುರಗಿ ನಗರದ ಎನ್.ಜಿ.ಓ. ಕಾಲನಿಯ ಜವಾಹರ್ ಶಿಕ್ಷಣ ಸಂಸ್ಥೆ ಬೂತ್ ಸಂಖ್ಯೆ 93ರಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಮತದಾನ ಮಾಡಿದರು. ಬಳಿಕ ಮಾತಾನಾಡಿದ ಅವರು ಗೆಲ್ಲುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಅದೇ ರೀತಿಯಲ್ಲಿ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಅವರ ಪತ್ನಿ ಶ್ರುತಿ ಖರ್ಗೆ ಹಾಗೂ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು ಚಿತ್ತಾಪುರ ವಿಧಾನಸಭಾ ಮತ ಕ್ಷೇತ್ರದ ಗುಂಡಗುರ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್ ನಂಬರ್ 26 ರಲ್ಲಿ ಮತದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, 100 ಶೇ. ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿಯ ಹಿಂಡಲಗಾ ಸಮೀಪ ವಿಜಯನಗರ ಕನ್ನಡ- ಮರಾಠಿ ಶಾಲೆಯ ಮತಗಟ್ಟೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುಟುಂಬ ಮತ ಚಲಾಯಿಸಿದರು.
ವಿಜಯಪುರ ಸಂಸದ, ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಕುಟುಂಬ ಸಮೇತ ವಿಜಯಪುರ ನಗರ ಮತ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಭೂತನಾಳ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ 14ರಲ್ಲಿ ಮತ ಚಲಾಯಿಸಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿರುವ ಮತಗಟ್ಟಗೆ ಕುಟುಂಬ ಸಮೇತ ಆಗಮಿಸಿ ಮತ ಚಲಾಯಿಸಿದರು.