ಬೃಹತ್ ಮತ್ತು ಮದ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಘೋಷಣೆ
ಕೆಐಎಡಿಬಿಯಿಂದ ಪಡೆದಿರುವ ಜಮೀನನ್ನು ಅದೇ ಉದ್ದೇಶಕ್ಕೆ ಬಳಸಲು ಸೂಚನೆ
ವಿದ್ಯಾವಂತ ಯುವಕ/ಯುವತಿಯರ ಉದ್ಯೋಗಕ್ಕೆ ಆದ್ಯತೆ
ಬೆಂಗಳೂರು:
ರೋಗಗ್ರಸ್ತ ನಿಗಮಗಳಲ್ಲಿ ಬಂಡವಾಳವನ್ನು ಹಿಂತೆಗೆದುಕೊಂಡು ಪುನಶ್ಚೇತನಗೊಳಿಸಿ ಲಾಭದಾಯಕದತ್ತ ಕೊಂಡಯ್ಯಲು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಹೇಳಿದರು.
ಶುಕ್ರವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗೋಷ್ಡಿಯಲ್ಲಿ ಮಾತನಾಡಿದ ಅವರು ಕಲಬುರಗಿಯ ಸಿಮೆಂಟ ಕಾರ್ಪೋರೇಷನ್, ಮೈಶುಗರ್, ಮೈಸೂರು ಪೇಪರ್ ಮಿಲ್ಸ್ ಸೇರಿದಂತೆ ಹಲವಾರು ನಿಗಮಗಳು ಮತ್ತು ಸಂಸ್ಥೆಗಳು ನಷ್ಟದ ಹಾದಿಯಲ್ಲಿವೆ. ತಾವು ಎರಡು ದಿನಗಳ ಹಿಂದೆ ದೆಹಲಿಗೆ ಭೇಟಿ ನೀಡಿದ ವೇಳೆ ಸಂಬಂಧಪಟ್ಟ ಸಚಿವರ ಜೊತೆ ಚರ್ಚೆ ನಡೆಸಿ ಇವುಗಳನ್ನು ಯಾವ ರೀತಿ ಪುನಶ್ಚೇತನ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು.
ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ಕೈಗಾರಿಕೆಗಳನ್ನು ಮುಚ್ಚಲು ಅವಕಾಶ ನೀಡುವುದಿಲ್ಲ. ಸಾಧ್ಯವಾದಷ್ಟು ಕೈಗಾರಿಕೆಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು.
ರಾಜ್ಯದಲ್ಲಿರುವ ಎಲ್ಲ ನೈಸರ್ಗಿಕ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ಕೈಗಾರಿಕಾ ಉದ್ಯೋಗ ಕ್ರಾಂತಿ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿ(ಕೆ ಐಎಡಿಬಿ) ಮೂಲಕ ಜಮೀನನ್ನು ಉದ್ಯಮಿಗಳು ಯಾವ ಕಾರಣಕ್ಕೆ ಪಡೆದಿದ್ದಾರೋ ಅದೇ ಉದ್ದೇಶಕ್ಕೆ ಬಳಸಬೇಕು. ಒಂದು ವೇಳೆ ಇದರ ಬಗ್ಗೆ ಎಲ್ಲಿಯಾದರೂ ದುರುಪಯೋಗವಾಗಿದ್ದರೆ ಸಮೀಕ್ಷೆ ನಡೆಸಲು ಸೂಚನೆ ನೀಡಿರುವುದಾಗಿ ತಿಳಿಸಿದರು.
ಕೆಐಎಡಿಬಿಯಿಂದ ಪಡೆದುಕೊಂಡಿರುವ ಜಮೀನನ್ನು ಯಾವುದೇ ಕಾರಣಕ್ಕೂ ಬೇರೆ ಉದ್ದೇಶಕ್ಕೆ ಬಳಸಲು ಅವಕಾಶವಿಲ್ಲ. ಅದನ್ನು ನಾವು ಸೇಲ್ ಡೀಡ್ ಮಾಡಿರುವುದಿಲ್ಲ. ಒಂದು ವೇಳೆ ಅನ್ಯ ಕಾರಣಗಳಿಗೆ ಜಮೀನನ್ನು ಬಳಸಿಕೊಂಡಿದ್ದರೆ ತನಿಖೆಗೆ ಆದೇಶಿಸುತ್ತೇನೆ ಎಂದು ನಿರಾಣಿ ಪ್ರಕಟಿಸಿದರು.
ಮುಂದಿನ ದಿನಗಳಲ್ಲಿ ಉತ್ತಮವಾದ ಕೈಗಾರಿಕಾ ವಾತಾವರಣ ಮೂಡಿಸುವ ಸಂಬಂಧ ಕೇಂದ್ರ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಕೋಲಾರ ಜಿಲ್ಲೆ ಕೆಜಿಎಪ್ ಬಳಿ 3 ಸಾವಿರಕ್ಕೂ ಹೆಚ್ಚು ಎಕರೆ ಜಮೀನು ಇದೆ.
ಈ ಹಿಂದೆ ಇಲ್ಲಿ ಹೆಚ್ಚಿನ ಪ್ರಮಾಣದ ಬಂಗಾರ ಚಿನ್ನ ಸಿಗುತ್ತಿತ್ತು. ಒಂದು ಟನ್ ಗಣಿಗಾರಿಕೆಗೆ 40 ಗ್ರಾಂ ಚಿನ್ನ ಸಿಗುತ್ತಿತ್ತುಘಿ. ಈಗ ಅದರ ಪ್ರಮಾಣ ಕಡಿಮೆಯಾಗಿದೆ ಎಂದರು.
ಸುಮಾರು 3, 200 ಎಕರೆ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇಲ್ಲ ಎಂದು ಅಧಿಕಾರಿಗಳು ಸಮೀಕ್ಷೆ ನಡೆಸಿ ವರದಿ ನೀಡಿದ್ದಾರೆ. ಹೀಗಾಗಿ ಜಮೀನನ್ನು ನಮಗೆ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ಬಂದಿದೆ. ಕೈಗಾರಿಕೆ ಬಳಕೆಗೆ ನೀಡಿದರೆ ನಾವು ಕೈಗಾರಿಕಾ ಟೌನ್‍ಶಿಪ್ ಮಾಡಲಿದ್ದೇವೆ
ಎಂದು ನಿರಾಣಿ ಘೋಷಿಸಿದರು.
ಈ ಹಿಂದೆ ನಾನು ಐದು ವರ್ಷ ಕೈಗಾರಿಕಾ ಸಚಿವನಾಗಿದ್ದ ವೇಳೆ ಉತ್ತಮವಾದ ಕೆಲಸ ಮಾಡಿದ್ದೇನೆ. ದೇಶದಲ್ಲೇ ಮೊದಲ ಬಾರಿಗೆ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲಾಗಿತ್ತುಘಿ. ಸುಮಾರು ₹11.8 ಲಕ್ಷ ಕೋಟಿ ಬಂಡವಾಳವನ್ನು ಹೂಡಲಾಗಿತ್ತು. ಇದರಿಂದ 15 ಲಕ್ಷ ವಿದ್ಯಾವಂತ ಯುವಕರಿಗೆ ಉದ್ಯೋಗ ನೀಡಲಾಗಿದೆ.
ಮೊದಲ ಬಾರಿಗೆ ಲ್ಯಾಂಡ್ ಬ್ಯಾಂಕ್ ಸ್ಥಾಫಿಸಿ ಕೃಷಿಗೆ ಯೋಗ್ಯವಲ್ಲದ ಜಮೀನನ್ನು ವಶಪಡಿಸಿಕೊಂಡು ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತಿದ್ದೇವೆ. ಸುಮಾರು ₹1.25 ಲಕ್ಷ ಪರಿಹಾರವನ್ನು ನೀಡಲಾಗುತ್ತಿತ್ತು. ಇದರ ಪರಿಣಾಮ ಉದ್ದಿಮೆದಾರರಿಗೆ ಸುಲಭವಾಗಿ ಬಂಡವಾಳ ಹೂಡಿಕೆ ಮಾಡಲು ಅನುಕೂಲವಾಯಿತು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಮಟ್ಟದಲ್ಲಿ ಕೈಗಾರಿಕಾ ಅದಾಲತ್‍ಗಳನ್ನು ನಡೆಸಲಾಗುವುದು. ನಮ್ಮ ಸರ್ಕಾರ ಉದ್ದಿಮೆದಾರರ ಮನೆಬಾಗಿಲಿಗೆ ಹೋಗಲಿದೆ. ಉದ್ದಿಮೆಯಾಗಿ ಉದ್ಯೋಗ ಎಂಬ ಕೈಗನ್ನಡಿಯೊಂದಿಗೆ ಐಟಿಐ, ಬಿಎ, ಬಿಕಾಂ, ಬಿಎಸ್ಸಿ, ಎಂಸ್ಸಿ, ಎಂಕಾಮ್, ಪಿಎಚ್‍ಡಿ ವಿದ್ಯಾವಂತರಿಗೆ ಉದ್ಯೋಗ ನೀಡುವುದೇ ನನ್ನ ಮೊದಲ ಗುರಿ ಎಂದು ಹೇಳಿದರು.
ಕೇಂದ್ರ ಸರ್ಕಾರವು ಇನ್ವೆಸ್ಟ್ ಇಂಡಿಯ ಎಂಬ ವಿನೂತನ ಯೋಜನೆಯನ್ನು ಆರಂಭಿಸಿದೆ. ದೇಶ, ವಿದೇಶಗಳಿಂದ ಬಂಡವಾಳ ಹೂಡಿಕೆ ಮಾಡಲು ಬರುವವರಿಗೆ ಇಲ್ಲಿ ಸಮಗ್ರವಾದ ಮಾಹಿತಿಯನ್ನು ನೀಡಲಾಗುತ್ತದೆ. ರಾಜ್ಯದಿಂದಲೂ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗುವುದು.
ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳು, ಇಲ್ಲಿನ ಮೂಲಭೂತ ಸೌಕರ್ಯ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ಒದಗಿಸಲಾಗುವುದು. ಕರ್ನಾಟಕ ಕೂಡ ಇನ್ವೆಸ್ಟ್ ಇಂಡಿಯಾದಲ್ಲಿ ಪಾಲುದಾರ ರಾಜ್ಯವಾಗಿದೆ ಎಂದು ಮಾಹಿತಿ ಒದಗಿಸಿದರು.
ಮೈಸೂರು ಲ್ಯಾಂಪ್ಸ್ ಬಳಿ 21 ಎಕರೆ ಜಾಗವಿದ್ದುಘಿ, ಅಲ್ಲಿ ಥೀಮ್‍ಪಾರ್ಕ್ ನಿರ್ಮಾಣ ಮಾಡಲು ತೀರ್ಮಾನ ಮಾಡಲಾಗಿದ್ದು, ಇದೇ 19ರಂದು ಭೂಮಿ ಪೂಜೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಎನ್‍ಜಿಎïನಲ್ಲಿ ಜಮೀನಿದ್ದು, ಅಲ್ಲಿ ಪಾರ್ಕ್ ಮಾಡುವ ಉದ್ದೇಶವಿದೆ ಎಂದು ಹೇಳಿದರು.
ಕೈಗಾರಿಕಾ ಇಲಾಖೆಯಲ್ಲಿ ನನ್ನ ಅನುಭವದ ಜತೆಗೆ ಹಿಂದಿನ ಸಚಿವರಾದ ಜಗದೀಶ್ ಶೆಟ್ಟರ್ ಅವರ ಅನುಭವದ ಮಾರ್ಗದರ್ಶನ ಪಡೆದುಕೊಂಡು ಉತ್ತಮವಾಗಿ ನಿರ್ವಹಣೆ ಮಾಡಲಾಗುವುದು. 2008 ಮತ್ತು 2013ರಲ್ಲಿ ಇಡೀ ಜಗತ್ತು ಕರ್ನಾಟಕದತ್ತ ನೋಡುವಂತೆ ಕೈಗಾರಿಕೆಯನ್ನು ನಿರ್ವಹಣೆ ಮಾಡಿದ್ದೆವು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಉಳಿದ 20 ತಿಂಗಳ ಅವಧಿಯಲ್ಲಿ ಉತ್ತಮ ಕೆಲಸ ಮಾಡುತ್ತೇವೆ ಎಂದು ಹೇಳಿದ ಅವರು, ಗುಡಿ ಕೈಗಾರಿಕೆಯಿಂದ ಬೃಹತ್ ಕೈಗಾರಿಕೆವರೆಗೆ ಹೆಚ್ಚು ಆದ್ಯತೆ ಕೊಡಲಾಗುತ್ತದೆ. ಪ್ರಧಾನಿ ಮೋದಿ ಅವರು ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದಾರೆ. ಸ್ಟಾರ್ಟಪ್‍ಗಳಿಗೆ ಉತ್ತೇಜನ ನೀಡಿದ್ದಾರೆ. ಅದೇ ನಿಟ್ಟಿನಲ್ಲಿ ನಾವು ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದು ಶಪಥ ಮಾಡಿದರು.
ಹೂಡಿಕೆದಾರರ ಸಮಾವೇಶ ಮುಂದೂಡಿಕೆ?:
ರಾಜ್ಯದಲ್ಲಿ ಕೋವಿಡ್-19 ಇರುವ ಕಾರಣ ಬಹುನಿರೀಕ್ಷಿತ ಬಂಡವಾಳದಾರರ ಸಮಾವೇಶ ಮುಂದೂಡುವ ಮುನ್ಸೂಚನೆಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ನೀಡಿದ್ದಾರೆ.
ಈಗಾಗಲೇ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಫೆಬ್ರವರಿ ತಿಂಗಳಿನಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಕೋವಿಡ್ ಸಂದರ್ಭದಲ್ಲಿ ಆರು ತಿಂಗಳ ಅವಧಿಯಲ್ಲಿ ಯಶಸ್ವಿಯಾಗಿ ಮಾಡಲು ಆಗುತ್ತದೆಯೋ ಇಲ್ಲವೋ ಎಂಬ ಅನುಮಾನುವನ್ನು ವ್ಯಕ್ತಪಡಿಸಿದರು.
ಈ ಸಂಬಂಧ ಸದ್ಯದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.