ಬೆಂಗಳೂರು, ಮಾರ್ಚ್ 12, (ಕರ್ನಾಟಕ ವಾರ್ತೆ) : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ (PM-KISAN) ಅಡಿಯಲ್ಲಿ 22ನೇ ಕಂತಿನ ಆರ್ಥಿಕ ನೆರವನ್ನು ಬಿಡುಗಡೆ ಮಾಡಲು ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಗೌರವಾನ್ವಿತ ಪ್ರಧಾನ ಮಂತ್ರಿಗಳು 2026 ನೇ ಮಾರ್ಚ್ 13 ರಂದು ಸಂಜೆ 5.00 ಗಂಟೆಗೆ ಅಸ್ಸಾಂನ ಗುವಾಹಟಿಯಲ್ಲಿ ಆಯೋಜಿಸಲಾದ ಬೃಹತ್ ಸಮಾರಂಭದಲ್ಲಿ ದೇಶಾದ್ಯಂತದ ರೈತರಿಗೆ 22ನೇ ಕಂತಿನ ಹಣ ಬಿಡುಗಡೆಗೆ ಚಾಲನೆ ನೀಡಲಿದ್ದಾರೆ
ಕರ್ನಾಟಕ ರಾಜ್ಯದ ಒಟ್ಟು 41,40,106 ರೈತ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ದೊರೆಯಲಿದೆ. ಕೇಂದ್ರ ಸರ್ಕಾರವು ರಾಜ್ಯದ ರೈತರಿಗಾಗಿ ಒಟ್ಟು 828.02 ಕೋಟಿ ರೂ.ಗಳ ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ (DBT) ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಿದೆ.
ಈ ಯೋಜನೆಯನ್ನು 24 ಫೆಬ್ರವರಿ 2019 ರಂದು ಅಧಿಕೃತವಾಗಿ ಜಾರಿಗೆ ತರಲಾಯಿತು (ಆದರೆ ಅನ್ವಯಿಕ ದಿನಾಂಕ 01.02.2019).
ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ (ಬೀಜ, ಗೊಬ್ಬರ ಇತ್ಯಾದಿ ಖರೀದಿಗಾಗಿ) ಅರ್ಹ ರೈತ ಕುಟುಂಬಗಳಿಗೆ ಪ್ರತಿ ವರ್ಷಕ್ಕೆ 6,000 ರೂ.ಗಳನ್ನು ನೀಡಲಾಗುತ್ತದೆ.
ಈ ಮೊತ್ತವನ್ನು ತಲಾ 2,000 ರೂ.ಗಳಂತೆ ವರ್ಷಕ್ಕೆ ಮೂರು ಕಂತುಗಳಲ್ಲಿ ನಾಲ್ಕು ತಿಂಗಳ ಅಂತರದಲ್ಲಿ ವಿತರಿಸಲಾಗುತ್ತದೆ.
ಮಾರ್ಚ್ 13 ರಂದು ನಡೆಯಲಿರುವ ಈ ಐತಿಹಾಸಿಕ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ರಮವನ್ನು “ಪಿ.ಎಂ. ಕಿಸಾನ್ ಉತ್ಸವ ದಿವಸ” ಎಂದು ಆಚರಿಸಲಾಗುತ್ತಿದ್ದು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಅರ್ಹ ರೈತರು ತಮ್ಮ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವುದನ್ನು ಖಚಿತಪಡಿಸಿಕೊಳ್ಳುವುದು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ pmkisan.gov.in ಗೆ ಭೇಟಿ ನೀಡಬಹುದು ಎಂದು ಅಪರ ಕೃಷಿ ನಿರ್ದೇಶಕರು (ಮಾಹಿತಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
