Home ಕಲಬುರ್ಗಿ ಪ್ರಧಾನಿ ಮೋದಿಯವರು ‘ನೀಲಕಂಠ’ ಹಾವುಗಳನ್ನು ಹೇಗೆ ಪಳಗಿಸಬೇಕು ಎಂಬುದು ಅವರಿಗೆ ಗೊತ್ತು: ಸಿಎಂ ಬೊಮ್ಮಾಯಿ

ಪ್ರಧಾನಿ ಮೋದಿಯವರು ‘ನೀಲಕಂಠ’ ಹಾವುಗಳನ್ನು ಹೇಗೆ ಪಳಗಿಸಬೇಕು ಎಂಬುದು ಅವರಿಗೆ ಗೊತ್ತು: ಸಿಎಂ ಬೊಮ್ಮಾಯಿ

49
0
PM Modi knows how to tame 'Neelkanth' snakes: CM Bommai
PM Modi knows how to tame 'Neelkanth' snakes: CM Bommai

ಕಲಬುರಗಿ:

ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷದ ಹಾವು ಎಂದು ಕರೆಯುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಮನೋಧರ್ಮವನ್ನು ತೋರಿಸಿದ್ದಾರೆ. ರಾಜ್ಯದಲ್ಲಿ ಮೋದಿ ಅವರು ಬಂದು ಪ್ರಚಾರ ಮಾಡಿದ ನಂತರ ರಾಜಕೀಯ ಚಿತ್ರಣವೇ ಬದಲಾಗಬಹುದು, ಜನರು ಬಿಜೆಪಿ ಕಡೆಗೆ ಒಲಿಯಬಹುದು ಎಂಬ ಭಯ ಕೂಡ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ. ಇದರಿಂದಾಗಿಯೇ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸೇಡಂನಲ್ಲಿ ನಿನ್ನೆ ಶುಕ್ರವಾರ ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿ ರಾಜ್‌ಕುಮಾರ್ ಪಾಟೀಲ್ ತೇಲ್ಕೂರ್ ಅವರ ಪರ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ವಾಸ್ತವವಾಗಿ ಮೋದಿಯವರು ಕೊರಳಲ್ಲಿ ಹಾವು ಧರಿಸಿರುವ ನೀಲಕಂಠನಂತೆ. ಹಾವುಗಳನ್ನು ಹೇಗೆ ಪಳಗಿಸಬೇಕು ಮತ್ತು ದೇಶದ ಜನರ ಮುಂದೆ ಹೇಗೆ ವಿನಮ್ರರಾಗಬೇಕು ಎಂದು ಅವರಿಗೆ ಗೊತ್ತಿದೆ. ಈ ‘ನೀಲಕಂಠ’ ದೇಶದಲ್ಲಿ ಭಯೋತ್ಪಾದನೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ, ಬಡತನ ನಿರ್ಮೂಲನೆಗೆ ಶ್ರಮಿಸಿದ್ದಾರೆ ಮತ್ತು ರೈತರ ಕಲ್ಯಾಣಕ್ಕಾಗಿ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಹೇಳಿದರು.

ತಮಗೆ ಮೀಸಲಾತಿ ಕೊಡಿ ಎಂದು ಒತ್ತಾಯ ಮಾಡಲು ಲಿಂಗಾಯತರು ಮತ್ತು ಒಕ್ಕಲಿಗರು ಭಿಕ್ಷುಕರಲ್ಲ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿಕೆಗೆ ಬೊಮ್ಮಾಯಿ, ಹಾಗಾದರೆ ಎಸ್‌ಸಿ/ಎಸ್‌ಟಿ ಮತ್ತು ಹಿಂದುಳಿದ ಸಮುದಾಯದವರು ಭಿಕ್ಷುಕರೇ ಎಂದು ಕೇಳಿದರು. ಕಾಂಗ್ರೆಸ್ ನಾಯಕರು ಜನರನ್ನು ಭಿಕ್ಷುಕರಂತೆ ನಡೆಸಿಕೊಳ್ಳುತ್ತಾರೆ ಎಂಬುದು ಅವರ ಹೇಳಿಕೆಗಳೇ ತೋರಿಸುತ್ತವೆ ಎಂದರು.

ಇದಕ್ಕೂ ಮುನ್ನ ಅವರು ಮತ್ತು ಚಿತ್ರನಟಿ ಶ್ರುತಿ ರೋಡ್ ಶೋನಲ್ಲಿ ಭಾಗವಹಿಸಿದ್ದರು. ರಾಜ್ಯದಲ್ಲಿ ಅಸ್ಥಿರ ಸರ್ಕಾರ ತರಬೇಡಿ, ಜನಪರ ಯೋಜನೆಗಳನ್ನು ಜಾರಿಗೆ ತರಲು ಬಿಜೆಪಿಗೆ ಸ್ಪಷ್ಟ ಜನಾದೇಶ ನೀಡಬೇಕು ಎಂದು ಶ್ರುತಿ ಮತದಾರರಲ್ಲಿ ಮನವಿ ಮಾಡಿದರು.

LEAVE A REPLY

Please enter your comment!
Please enter your name here