ಚಿತ್ರದುರ್ಗ:
ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ಬಿಡುಗಡೆಗೆ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
ಕಳೆದ 14 ತಿಂಗಳಿಂದ ಜಿಲ್ಲಾ ಕಾರಾಗೃಹದಲ್ಲಿದ್ದ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ಬಿಡುಗಡೆಗೆ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
ಮೊದಲ ಪೋಕ್ಸೋ ಪ್ರಕರಣದಲ್ಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಶ್ಯೂರಿಟಿಗಳ ಪರಿಶೀಲನೆ ನಂತರ ಬಿಡುಗಡೆಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಕೆ.ಕೋಮಲ ಆದೇಶ ಮಾಡಿದರು.ಮುರುಘಾ ಶರಣರ ಪರವಾಗಿ ಹೈಕೋರ್ಟ್ ನ್ಯಾಯವಾದಿ ಸಂದೀಪ್ ಪಾಟೀಲ್ ನ್ಯಾಯಾಲಯಕ್ಕೆ ಹಾಜರಾಗಿ ವಾದ ಮಂಡಿಸಿದರು.
ನ್ಯಾಯಾಲಯದ ಎಲ್ಲ ಪ್ರಕ್ರಿಯೆಗಳು ಮುಗಿದು ಕಾರಾಗೃಹಕ್ಕೆ ಆದೇಶ ಪ್ರತಿ ತಲುಪಿದರೆ ಶರಣರು ಇಂದೇ ಹೊರಗೆ ಬರಲಿದ್ದಾರೆ.
ನ್ಯಾಯಾಲಯದ ಕಲಾಪಗಳ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಂದೀಪ್ ಪಾಟೀಲ್, ಹೈಕೋರ್ಟ್ ಜಾಮೀನು ಆದೇಶದಂತೆ ಇಂದು ಮೊದಲನೇ ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶರಣರಿಗೆ ಜಾಮೀನು ಮಂಜೂರಾಗಿದ್ದು, ಜಿಲ್ಲಾ ನ್ಯಾಯಾಲಯ ಬಿಡುಗಡೆ ಆಗಲಿದ್ದಾರೆ ಎಂದು ತಿಳಿಸಿದರು.
ಇನ್ನೂ ಎರಡನೇ ಪ್ರಕರಣದಲ್ಲಿ ಅರೆಸ್ಟ್ ಅಥವಾ ಕಸ್ಟಡಿಗೆ ಹೋಗಿರಲಿಲ್ಲ. ಅದರಲ್ಲಿ ತನಿಖೆ ಮುಗಿದಿದೆ, ಚಾರ್ಜ್ ಶೀಟ್ ಹಾಕಲಾಗಿದೆ. ಆದರೂ, ಸರ್ಕಾರಿ ವಕೀಲರು ನ್ಯಾಯಾಂಗ ಬಂಧನಕ್ಕೆ ಕೇಳಿದ್ದರು.ತನಿಖೆಯ ವ್ಯಾಪ್ತಿ ಮುಗಿದು ಹೋಗಿದೆ. ಬಾಡಿ ವಾರೆಂಟ್ ಆದೇಶ ಇದ್ದರೂ ಅವರನ್ನು ಕಾರಾಗೃಹದಲ್ಲಿ ಇಡುವಂತಿಲ್ಲ ಎಂದು ಅಭಿಪ್ರಾಯಪಟ್ಟರು.