ಬ್ರಾಹ್ಮಣ ಸಮುದಾಯ ಒತ್ತಾಯ; ನಿರ್ದೇಶಕರ ಸಮ್ಮತಿ
ಬೆಂಗಳೂರು:
ಬ್ರಾಹ್ಮಣ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿರುವ, ನೋವುಂಟು ಮಾಡಿರುವ ‘ಪೊಗರು’ ಚಿತ್ರದ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಬ್ರಾಹ್ಮಣ ಸಮುದಾಯ ಆಗ್ರಹಿಸಿದ್ದು, ನಿರ್ದೇಶಕ ನಂದಕಿಶೋರ್ ಸಮ್ಮತಿಸಿದ್ದಾರೆ.
ಸಮುದಾಯವೊಂದರ ವೃತ್ತಿಯನ್ನು ಅವಹೇಳನಕಾರಿಯಾಗಿ ಚಿತ್ರಿಸಿ ಅಪಮಾನಿಸಲಾಗಿದೆ. ಇಂತಹ ದೃಶ್ಯಗಳಿಗೆ ಕತ್ತರಿ ಬೀಳದಿದ್ದರೆ ಹೋರಾಟ ತೀವ್ರವಾಗಲಿದೆ ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದು, ಬುಧವಾರ ಸಂಜೆಯೊಳಗೆ ಅಂತಹ ದೃಶ್ಯಗಳನ್ನು ತೆಗೆಯಲಾಗುವುದು. ಒಂದು ವೇಳೆ ತಾಂತ್ರಿಕ ಅಡಚಣೆ ಎದುರಾದಲ್ಲಿ ಬ್ಲಾಕ್ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ನಂದ ಕಿಶೋರ್ ಒಪ್ಪಿಕೊಂಡಿದ್ದಾರೆ.
ಇನ್ನು, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಪ್ರತಿಭಟಿಸಿರುವ ಬ್ರಾಹ್ಮಣ ಮಂಡಳಿ ಸದಸ್ಯರು ಪೊಗರು ಸಿನಿಮಾದಲ್ಲಿರುವ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆಯುವಂತೆ ತೀವ್ರ ಒತ್ತಡ ಹೇರಿದ್ದು, ಮಾತಿನ ಚಕಮಕಿ ನಡೆದಿದೆ. ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಿದ ನಂತರವಷ್ಟೇ ಚಿತ್ರ ಪ್ರದರ್ಶಿಸಿ ಎಂದಿದ್ದಾರೆ.
ಮೈಸೂರಿನಲ್ಲಿಯೂ ಸಹ ‘ಪೊಗರು’ ಸಿನಿಮಾದಲ್ಲಿ ಪುರೋಹಿತರನ್ನು ಅವಮಾನಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದ್ದಾರೆ. ಈ ಹಿಂದೆಯೂ ಸಹ ಅನೇಕ ಚಿತ್ರಗಳಲ್ಲಿ ಬ್ರಾಹ್ಮಣರಿಗೆ ಅವಮಾನ ಮಾಡೋ ದೃಶ್ಯಗಳನ್ನ ಬಲವಂತವಾಗಿ ಸೃಷ್ಟಿಸಲಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.
ಪದೇಪದೆ ಈ ರೀತಿಯ ಘಟನೆಗಳು ಮರುಕಳಿಸುತ್ತಿವೆ.ಇದಕ್ಕೆ ಸೆನ್ಸಾರ್ ಮಂಡಳಿ ಅಧಿಕಾರಿಗಳೇ ನೇರ ಹೊಣೆ. ಹೀಗಾಗಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಲಿ ಎಂದು ಪ್ರತಿಭಟನಾಕಾರರು ಅಗ್ರಹಿಸಿದ್ದಾರೆ.