ಬೆಂಗಳೂರು, ಜನವರಿ 4: ರಾಜಧಾನಿ ಬೆಂಗಳೂರಿನಲ್ಲಿ ರಾಜಕೀಯ ತಾಪಮಾನ ಹೆಚ್ಚಾಗುವ ಲಕ್ಷಣಗಳು ಗೋಚರವಾಗುತ್ತಿದ್ದು, ಜನವರಿ 5ರಂದು ನಿಗದಿಯಾಗಿದ್ದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಭಾರೀ ಪ್ರತಿಭಟನೆಗೆ ಬಾಗಲೂರು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ‘ತೃಷ್ಟಿಕರಣ ನೀತಿ’ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಈ ಪ್ರತಿಭಟನೆ ಬಾಗಲೂರು ಮುಖ್ಯರಸ್ತೆ ಬಳಿ ನಡೆಯಬೇಕಿತ್ತು.
ಪೊಲೀಸರ ಈ ನಿರ್ಧಾರಕ್ಕೆ ಹಿನ್ನೆಲೆ ಕರ್ನಾಟಕ ಉಚ್ಚ ನ್ಯಾಯಾಲಯದ ಸ್ಪಷ್ಟ ಆದೇಶ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆ ಯಾವುದೇ ಸ್ಥಳದಲ್ಲಿ ಮೆರವಣಿಗೆ ಅಥವಾ ಪ್ರತಿಭಟನೆ ನಡೆಸಬಾರದು ಎಂದು ಹೈಕೋರ್ಟ್ ಆದೇಶಿಸಿದೆ. ಇದೇ ಆದೇಶದ ಆಧಾರದಲ್ಲಿ ಪ್ರತಿಭಟನೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ಪೊಲೀಸರು ಲಿಖಿತ ನೋಟಿಸ್ ಮೂಲಕ ಬಿಜೆಪಿ ನಾಯಕರಿಗೆ ತಿಳಿಸಿದ್ದಾರೆ.
ಆದರೆ, ಪೊಲೀಸ್ ನೋಟಿಸ್ ಇದ್ದರೂ ಪ್ರತಿಭಟನೆ ಮುಂದುವರಿಸುವುದಾಗಿ ಬಿಜೆಪಿ ಪಟ್ಟು ಹಿಡಿದಿದೆ. ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಎಸ್.ಹರೀಶ್ ಅವರನ್ನು ಸಂಪರ್ಕಿಸಿದಾಗ,
“ಪೊಲೀಸರು ಅನುಮತಿ ನಿರಾಕರಿಸಿದ್ದರೂ, ನಿಗದಿಯಂತೆ ನಾಳೆ (ಜನವರಿ 5) ಪ್ರತಿಭಟನೆ ನಡೆಸುತ್ತೇವೆ. ಇದು ನಮ್ಮ ಹಕ್ಕಿನ ಹೋರಾಟ” ಎಂದು ಸ್ಪಷ್ಟವಾಗಿ ಹೇಳಿದರು.

ಈ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿರೋಧ ಪಕ್ಷದ ನಾಯಕರು, ಸಂಸದರು, ಶಾಸಕರು, ಮಾಜಿ ಬಿಬಿಎಂಪಿ ಸದಸ್ಯರು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆ ಇದೆ.
ಇತ್ತ, ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆ ಮುಂದುವರಿದರೆ ಪರಿಸ್ಥಿತಿ ಹೇಗೆ ತಿರುಗುತ್ತದೆ ಎಂಬುದರ ಬಗ್ಗೆ ರಾಜಕೀಯ ಮತ್ತು ಆಡಳಿತಾತ್ಮಕ ವಲಯದಲ್ಲಿ ತೀವ್ರ ಕುತೂಹಲ ಮೂಡಿದೆ.
ಜನವರಿ 5ರಂದು ಬಿಜೆಪಿ ಪೊಲೀಸರ ಸೂಚನೆಯನ್ನು ಮೀರಿ ಹೋರಾಟ ನಡೆಸುತ್ತದೆಯೇ? ಅಥವಾ ಆಡಳಿತ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುತ್ತದೆಯೇ? ಎಂಬುದು ನಾಳೆಯ ದಿನ ರಾಜಧಾನಿಯಲ್ಲಿ ಮಹತ್ವದ ರಾಜಕೀಯ ಕ್ಷಣವಾಗಲಿದೆ.
