ಬೆಂಗಳೂರು: ಬೆಂಗಳೂರು ಹೊರವಲಯದಲ್ಲಿ ಹೆಚ್ಚುತ್ತಿರುವ ರೇವ್ ಪಾರ್ಟಿ ಸಂಸ್ಕೃತಿಗೆ ತಡೆ ಹಾಕುವ ಉದ್ದೇಶದಿಂದ, ಪೊಲೀಸರು ರೆಸಾರ್ಟ್, ಹೋಂ ಸ್ಟೇ, ಫಾರ್ಮ್ ಹೌಸ್ ಮತ್ತು ಹೋಟೆಲ್ ಮಾಲಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ನೀಡಿದ್ದಾರೆ. ಹಲವು ಪಾರ್ಟಿಗಳಲ್ಲಿ ಡ್ರಗ್ಸ್ ಬಳಕೆಯ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಹುಟ್ಟುಹಬ್ಬ, ಎಂಗೇಜ್ಮೆಂಟ್ ಹಾಗೂ ಮದುವೆ ಕಾರ್ಯಕ್ರಮಗಳ ಹೆಸರಿನಲ್ಲಿ ನಡೆಯುವ ಕೆಲವು ಪಾರ್ಟಿಗಳಲ್ಲಿ ಡ್ರಗ್ಸ್ ಸೇವನೆ ನಡೆದಿರುವುದಕ್ಕೆ ಸಾಕ್ಷ್ಯಗಳು ದೊರೆತಿರುವುದರಿಂದ, ಪೊಲೀಸರು ಈಗ ಬಿಗಿತ ಹಾಕಲು ಮುಂದಾಗಿದ್ದಾರೆ. ಈಶಾನ್ಯ ವಿಭಾಗದ ಡಿಸಿಪಿ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಆಯಾ ಜಾಗದ ಮಾಲಿಕರೊಂದಿಗೆ ಸಭೆ ನಡೆಸಿ, ನಿಯಮಿತ ಮಾರ್ಗಸೂಚಿಗಳನ್ನು ನೀಡಿದರು.
ಪೋಲಿಸರಿಂದ ನೀಡಲಾದ ಮುಖ್ಯ ಸೂಚನೆಗಳು:
- ರೆಸಾರ್ಟ್, ಹೋಂ ಸ್ಟೇ, ಹೋಟೆಲ್‌ಗಳು ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಎನ್‌ಒಸಿ ಪಡೆಯಬೇಕು
- ಪ್ರತಿದಿನ ಬಾಡಿಗೆಗೆ ಕೊಡುವ ವ್ಯಕ್ತಿಗಳ ಮಾಹಿತಿಯನ್ನು ಸಂಬಂಧಿತ ಪೊಲೀಸ್ ಠಾಣೆಗೆ ನೀಡಬೇಕು
- ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ನಡೆಯುವ ಪರಿಸ್ಥಿತಿಯಲ್ಲಿ ಮಾಲಿಕರ ವಿರುದ್ಧ ಕೇಸ್ ದಾಖಲಿಸಲಾಗುತ್ತದೆ
- ವಾರಾಂತ್ಯದಲ್ಲಿ ಅಥವಾ ಯಾವುದೇ ದಿನಗಳಲ್ಲಿ ಬಾಡಿಗೆ ನೀಡುವಾಗ ಹೆಚ್ಚಿನ ಜಾಗೃತತೆ ವಹಿಸಬೇಕು
- ಹೋಂ ಸ್ಟೇಗಳನ್ನು ನಡೆಸುವವರು ಅಧಿಕೃತ ನೋಂದಣಿ ಮಾಡಿರಬೇಕು

ಹಿಂದಿನ ಪ್ರಕರಣಗಳಲ್ಲಿ ಪೊಲೀಸರು ಡ್ರಗ್ಸ್ ಪತ್ತೆಹಚ್ಚಿ ಕೇಸು ದಾಖಲಿಸಿದ್ದರೂ, rave party ಗಳಲ್ಲಿ ಡ್ರಗ್ಸ್ ಪೂರೈಕೆ ತಡೆಯುವುದು ಸವಾಲು ಆಗಿದ್ದು, ಇದೀಗ ಬಿಗಿ ಕ್ರಮಗಳ ಮೂಲಕ ಈ ಪ್ರಸಂಗಕ್ಕೆ ಮುಕ್ತಾಯ ತರುವ ಉದ್ದೇಶದೊಂದಿಗೆ ಪೋಲೀಸರ ಕಾರ್ಯಾಚರಣೆ ಮುಂದಾಗಿದೆ.
ನಗರದ ಹೊರವಲಯಗಳಲ್ಲಿ ನಡೆಯುವ ಡ್ರಗ್ಸ್ ಪಾರ್ಟಿಗಳಿಗೆ ಕಡಿವಾಣ ಹಾಕಲು ಬೆಂಗಳೂರು ನಗರ ಪೊಲೀಸರು ಕೈಗೊಂಡಿರುವ ಈ ಕ್ರಮ, ಸಾರ್ವಜನಿಕ ಸುರಕ್ಷತೆಗೆ ಮಹತ್ವದ ಹೆಜ್ಜೆಯೆನ್ನಿಸಿದೆ.