ಬೆಂಗಳೂರು:
ಬೆಳ್ಳಂಬೆಳಗ್ಗೆ ರಾಜಧಾನಿ ಬೆಂಗಳೂರಿನ ಎರಡು ಕಡೆ ಪೊಲೀಸ್ ಫೈರಿಂಗ್ ನಡೆದಿದೆ.
ಕೊಲೆ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಬ್ರಹ್ಮದೇವರ ಗುಡ್ಡದಲ್ಲಿ ಘಟನೆ ನಡೆದಿದೆ. ವಿಶ್ವ ಅಲಿಯಾಸ್ ಸೈಕೋ ಗುಂಡೇಟು ತಿಂದ ಆರೋಪಿ.
ಕಾಮಾಕ್ಷಿಪಾಳ್ಯದ ಕೊಲೆ ಪ್ರಕರಣದಲ್ಲಿ ವಿಶ್ವ ಆರೋಪಿಯಾಗಿದ್ದನು. ಆರೋಪಿ ಇರುವ ಖಚಿತ ಮಾಹಿತಿ ತಿಳಿದ ಪೊಲೀಸರು ಬೆಳ್ಳಂಬೆಳಗ್ಗೆ ಆತನನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಆತ ಹೆಡ್ ಕಾನ್ಸ್ಟೇಬಲ್ ಮಂಜುನಾಥ್ ಅವರಿಗೆ ಡ್ಯಾಗರ್ನಿಂದ ಹಲ್ಲೆಗೈದು ಕೈಗೆ ಗಾಯಗೊಳಿಸಿ ಪರಾರಿಯಾಗಲು ಯತ್ನಿಸಿದ್ದನು. ಈ ವೇಳೆ ಪೊಲೀಸರು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದರೂ. ಆದರೂ, ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ ಹಿನ್ನಲೆಯಲ್ಲಿ ವಿಜಯನಗರ ಎಸಿಪಿ ನಂಜುಂಡೇಗೌಡ ಮತ್ತು ಕಾಮಾಕ್ಷಿಪಾಳ್ಯ ಇನ್ಸ್ ಪೆಕ್ಟರ್ ಪ್ರಶಾಂತ್ ಆತನ ಬಲಗಾಲಿಗೆ ಹಾಗೂ ಬಲಗೈಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಆರೋಪಿ ವಿಶ್ವನ ಮೇಲೆ 11ಕ್ಕೂ ಹೆಚ್ಚು ಅಪರಾದ ಪ್ರಕರಣಗಳಿವೆ. ಈತ ಕಾಮಾಕ್ಷಿಪಾಳ್ಯದಲ್ಲಿ ಬನಶಂಕರಿ ನಿವಾಸಿ ಮಂಜುನಾಥ್ ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಗಾಯಾಳುಗಳಾದ ಮುಖ್ಯಪೇದೆ ಮಂಜುನಾಥ್ ಹಾಗೂ ಆರೋಪಿ ವಿಶ್ವನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಬ್ಯಾಡರ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ, ರೌಡಿಶೀಟರ್ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ನಟೋರಿಯಸ್ ರೌಡಿಶೀಟರ್ ಮಂಜ ಅಲಿಯಾಸ್ ಬೊಂಡ ಮಂಜನ ಕಾಲಿಗೆ ಸಿಸಿಬಿ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ತಲಘಟ್ಟಪುರ ಠಾಣೆ ರೌಡಿಶೀಟರ್ ಮಂಜ ಅಲಿಯಾಸ್ ಬೊಂಡ ಮಂಜನ ವಿರುದ್ಧ ಬರೋಬ್ಬರಿ 23 ಪ್ರಕರಣಗಳು ದಾಖಲಾಗಿದ್ದವು. ಕಳೆದ ಒಂದು ತಿಂಗಳಿನಿಂದ ಆರೋಪಿ ಪತ್ತೆಗಾಗಿ ಸಿಸಿಬಿ ಪೊಲೀಸರು ಕಾರ್ಯಚರಣೆ ಕೈಗೊಂಡಿದ್ದರು. ಕೋಣನಕುಂಟೆಯಲ್ಲಿ ಆರೋಪಿ ಇರುವ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಲು ತೆರಳಿದ್ದರು.
ಬೈಕ್ನಲ್ಲಿ ನಾರಾಯಣನಗರ ಬಳಿ ಪರಾರಿಯಾಗುತ್ತಿದ್ದ ಮಂಜನನ್ನು ಪೊಲೀಸರು ಅಡ್ಡಗಟ್ಟಿದ್ದಾರೆ. ಏಕಾಏಕೀ ಸಿಸಿಬಿ ಮುಖ್ಯಪೇದೆ ನಾಗರಾಜ್ ಕೈಗೆ ಆರೋಪಿ ಮಂಜ ಡ್ರ್ಯಾಗರ್ನಿಂದ ಹಲ್ಲೆ ಮಾಡಿದ್ದನು. ಈ ಗಾಳಿಯಲ್ಲಿ ಗುಂಡು ಹಾರಿಸಿದ ಇನ್ಸ್ಪೆಕ್ಟರ್ ಪುನೀತ್, ಮಂಜನನ್ನು ಶರಣಾಗುವಂತೆ ಎಚ್ಚರಿಕೆ ನೀಡಿದ್ದರು. ಆದರೂ, ಆತ ನಿರಾಕರಿಸಿ ಇನ್ಸ್ಪೆಕ್ಟರ್ ಮೇಲೂ ಹಲ್ಲೆಗೆ ಯತ್ನಿಸಿದ್ದನು.
ಈ ವೇಳೆ ನಾರಾಯಣನಗರ ಡಬಲ್ ರೋಡ್ನಲ್ಲಿ ತಮ್ಮ ಆತ್ಮರಕ್ಷಣೆಗಾಗಿ ಸಿಸಿಬಿ ಇನ್ಸ್ ಪೆಕ್ಟರ್ ಪುನೀತ್ ಕುಮಾರ್ ಆರೋಪಿ ಮಂಜನ ಎಡ ಮೊಣಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಸದ್ಯ ಗಾಯಾಳುಗಳಾದ ಮುಖ್ಯಪೇದೆ ನಾಗರಾಜ್ ಮತ್ತು ರೌಡಿಶೀಟರ್ ಮಂಜನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಂಘಟಿತ ಅಪರಾಧ ದಳ ಎಸಿಪಿ ಜಗನ್ನಾಥ್ ರೈ ನೇತೃತ್ವದ ತಂಡದಿಂದ ಕಾರ್ಯಚರಣೆ ಕೈಗೊಳ್ಳಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.